ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆ ಇದೇ ಮೊದಲ ಬಾರಿಗೆ ಇ-ಎಫ್‌ಐಆರ್ ವ್ಯವಸ್ಥೆಯನ್ನು ಪರಿಚಯಿಸಿದೆ. ಕಾಗದರಹಿತ ಹಾಗೂ ಪರಿಸರಸ್ನೇಹಿ ನೀತಿಗೆ ಒತ್ತು ನೀಡಲು ಇದೇ ಮೊದಲ ಬಾರಿಗೆ ಇ-ಎಫ್‌ಐಆರ್ ಸೌಲಭ್ಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ಕೊಟ್ಟರು.
ಇ-ಎಫ್‌ಐಅರ್ ದಾಖಲಿಸುವುದು ಹೇಗೆ?: ದಿನೇ ದಿನೇ ಪೊಲೀಸ್ ಇಲಾಖೆ ಸ್ಮಾರ್ಟ್ ಆಗುತ್ತಿದೆ. ಇ-ಎಫ್‌ಐಆರ್ ವ್ಯವಸ್ಥೆಯಿಂದ ಸಾರ್ವಜನಿಕರು ಸುಖಾಸುಮ್ಮನೆ ಪೊಲೀಸ್ ಠಾಣೆಗೆ ಅಲೆಯುವುದು ತಪ್ಪಲಿದೆ. ರಾಜ್ಯ ಪೊಲೀಸ್ ಇಲಾಖೆಯ ಅಧಿಕೃತ ಜಾಲತಾಣ ಕರ್ನಾಟಕ ಪೊಲೀಸ್ ವೆಬ್ಸೈಟ್ಗೆ ಹೋಗಿ ಅಲ್ಲಿ ಸಿಟಿಜನ್ ಡೆಸ್ಕ್ ಮೇಲೆ ಕ್ಲಿಕ್ ಮಾಡಿ ನೋಂದಾಯಿಸಬೇಕಿದೆ.
ಲಾಗಿನ್ ಆದ ಬಳಿಕ ಮೋಟಾರ್ ವಾಹನ ಕಳುವಿಗೆ ಸಂಬಂಧಪಟ್ಟಂತೆ ಇ-ಎಫ್‌ಐಅರ್ ದಾಖಲಿಸಬಹುದು. ವಾಹನದ ವಿವರ ಹಾಗೂ ದೂರುದಾರರ ಮಾಹಿತಿ ನಮೂದಿಸಬೇಕು. ಒಮ್ಮೆ ವಾಹನದ ನೋಂದಣಿ ಸಂಖ್ಯೆ, ಹೆಸರು ನಮೂದಿಸಿದರೆ ಸ್ವಯಂಚಾಲಿತವಾಗಿ ವಾಹನದ ಎಲ್ಲಾ ದಾಖಲಾತಿ ತಾನಾಗೇ ಭರ್ತಿಯಾಗಲಿದೆ. ನಂತರ ನಿಮ್ಮ ಮೊಬೈಲ್ ನಂಬರ್ಗೆ ಮೆಸೇಜ್ ಬರಲಿದೆ. ಈ ಮೂಲಕ ಸ್ವಯಂಚಾಲಿತವಾಗಿ ಇ-ಎಫ್‌ಐಅರ್ ದಾಖಲಾಗಲಿದೆ.
ಐಪಿಎಸ್ ಅಧಿಕಾರಿಗಳೊಂದಿಗೆ ಸಿಎಂ ಸಭೆ: ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಇದೇ ಮೊದಲ ಬಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಎಲ್ಲಾ ಐಪಿಎಸ್ ಅಧಿಕಾರಿಗಳ ಜತೆ ಸಭೆ ನಡೆಸುತ್ತಿದ್ದಾರೆ. ನೃಪತುಂಗ ರಸ್ತೆಯಲ್ಲಿರುವ ಪೊಲೀಸ್ ಮಹಾನಿರ್ದೇಶಕರ ಕಚೇರಿಯಲ್ಲಿ ಐಪಿಎಸ್ ಅಧಿಕಾರಿಗಳೊಂದಿಗೆ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಜಿ.ಪರಮೇಶ್ವರ್ ನೇತೃತ್ವದಲ್ಲಿ ಸಭೆ ನಡೆಯುತ್ತಿದೆ. ರಾಜ್ಯದ ಕಾನೂನು ಸುವ್ಯವಸ್ಥೆ, ಸಂಚಾರ ಹಾಗೂ ಸೈಬರ್ ಕ್ರೈಂ ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಭೆಯಲ್ಲಿ ಚರ್ಚೆಯಾಗುವ ಸಾಧ್ಯತೆಯಿದೆ. ಸುಳ್ಳು ಸುದ್ದಿ ತಡೆಯಲು ರಚಿಸಲಾಗಿದ್ದ ಫ್ಯಾಕ್ಟ್ ಚೆಕ್ ಬಗ್ಗೆಯೂ ಚರ್ಚಿಸುವ ಸಾಧ್ಯತೆಯಿದೆ.