ಬೆಂಗಳೂರು: ರಾಜ್ಯದ ಆಯಾ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಅಕ್ರಮ ನಡೆಯುತ್ತಿದ್ದರೆ, ಸೂಕ್ತ ಕಾನೂನು ಕ್ರಮ ಕೈಗೊಳ್ಳದಿದ್ದರೆ ಎಸ್ಪಿ ಅಥವಾ ಡಿಸಿಪಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಮೊದಲ ಬಾರಿಗೆ ನೃಪತುಂಗ ರಸ್ತೆಯಲ್ಲಿರುವ ಪೊಲೀಸ್ ಮಹಾನಿರ್ದೇಶಕರ ಕಚೇರಿಯಲ್ಲಿಂದು ಐಪಿಎಸ್ ಅಧಿಕಾರಿಗಳೊಂದಿಗೆ ಅವರು ಸಭೆ ನಡೆಸಿದರು. ಇದಕ್ಕೂ ಮೊದಲು ವಾಹನ ಕಳುವಾದರೆ ಆನ್ ಲೈನ್‌ನಲ್ಲಿ ದೂರು ನೀಡಲು ಇ-ಎಫ್‌ಐಆರ್ ಹಾಗೂ ದಂಡ ಪಾವತಿಸಲು ಇ-ಚಲನ್ ವ್ಯವಸ್ಥೆಗೆ ಚಾಲನೆ ನೀಡಿದರು.
ಸಭೆ ಬಳಿಕ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಸಿದ್ದರಾಮಯ್ಯ, ಜೂಜು, ಬೆಟ್ಟಿಂಗ್ ದಂಧೆ ಹಾಗು ಡ್ರಗ್ಸ್ ಚಟುವಟಿಕೆ ಸೇರಿದಂತೆ ಅಕ್ರಮಗಳು ಆಯಾ ಠಾಣಾ ವ್ಯಾಪ್ತಿಗಳ ಕೆಳ ಹಂತದ ಅಧಿಕಾರಿಗಳ ಗಮನಕ್ಕೆ ಬರದೇ ಯಾವುದು ನಡೆಯುವುದಿಲ್ಲ. ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವವರನ್ನು ಕೂಡಲೇ ಮಟ್ಟಹಾಕಬೇಕು. ಸಾಮಾನ್ಯವಾಗಿ ಕೆಳಹಂತದ ಅಧಿಕಾರಿಗಳು ತಪ್ಪು ಮಾಡಿದರೆ ಶಿಸ್ತು ಕ್ರಮ ಕೈಗೊಳ್ಳುವುದು ಒಂದು ಭಾಗ. ಆದರೆ ಇನ್ಮುಂದೆ ಸಂಘಟಿತ ಅಪರಾಧಗಳನ್ನು ನಿಯಂತ್ರಿಸದಿದ್ದರೆ ಎಸ್ಪಿ ಮಟ್ಟದ ಅಧಿಕಾರಿಗಳೇ ಹೊಣೆಗಾರರನ್ನಾಗಿಸಿ ಅವರ ವಿರುದ್ದ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದರು.