ಬೆಂಗಳೂರು : ದೇವಾಲಯಗಳ ಆವರಣ ಹಾಗೂ ಸುತ್ತಮುತ್ತ ನೂರು ಮೀಟರ್ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಹಾಗೂ ಬಳಕೆ ನಿಷೇಧಕ್ಕೆ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.
ಮುಜರಾಯಿ ಇಲಾಖೆ ವ್ಯಾಪ್ತಿಗೆ ಬರುವ ದೇಗುಲಗಳ ಸುತ್ತಮುತ್ತ ಬೀಡಿ, ಸಿಗರೇಟ್, ಪಾನ್ ಮಸಾಲ, ಗುಟ್ಕಾ ದಂತಹ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡಬಾರದು ಎಂಬ ಆದೇಶ ಶೀಘ್ರದಲ್ಲೇ ಹೊರಬೀಳಲಿದೆ.
ದೇವಾಲಯದ ಹೊರಭಾಗದಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಹೆಚ್ಚಾಗಿದ್ದು, ಗುಟ್ಕಾ ತಿಂದು ಕಾಂಪೌಂಡ್ ಸುತ್ತಮುತ್ತ ಉಗಿಯುತ್ತಾರೆ. ಇನ್ನು ಸಾರ್ವಜನಿಕ ಸ್ಥಳಗಳಲ್ಲಿ ಬೀಡಿ, ಸಿಗರೇಟು ಬಳಕೆಗೆ ನಿಷೇಧವಿದ್ದರೂ, ಬಳಕೆ ಮಾಡುತ್ತಿದ್ದಾರೆ. ಇದರಿಂದ ದೇವಾಲಯಕ್ಕೆ ಬರುವ ಭಕ್ತರ ಭಾವನೆಗೆ ಧಕ್ಕೆ ಆಗುವುದು ಮಾತ್ರವಲ್ಲದೆ ಕಿರಿಕಿರಿಯಾಗುತ್ತಿದೆ. ಈ ಸಂಬಂಧ ಇಲಾಖೆಗೆ ಹಾಗೂ ದೇವಾಲಯಗಳಿಗೂ ಭಕ್ತರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ದೇವಾಲಯದ ಸುತ್ತಮುತ್ತ ನೂರು ಮೀಟರ್ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಕಡಿವಾಣ ಹಾಕಲು ಕ್ರಮ ವಹಿಸಲಾಗುತ್ತಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಈಗಾಗಲೇ ಶಾಲಾ ಕಾಲೇಜುಗಳ ಆವರಣದಿಂದ ಸುಮಾರು ನೂರು ಮೀಟರ್ ವರೆಗೂ ಯಾವುದೇ ಅಂಗಡಿಗಳಲ್ಲಿ ಬೀಡಿ, ಸಿಗರೇಟ್ ಸೇರಿ ತಂಬಾಕು ಉತ್ಪನ್ನಗಳ ಮಾರಾಟ ಮಾಡುವಂತಿಲ್ಲ ಎಂಬ ಆದೇಶ ಜಾರಿಯಲ್ಲಿದೆ. ಇದೀಗ ಆ ನಿಯಮವನ್ನು ಧಾರ್ಮಿಕ ತಾಣಗಳಿಗೂ ವಿಸ್ತರಿಸಲಾಗುತ್ತಿದೆ. ಆ ಮೂಲಕ ದೇವಾಲಯಗಳನ್ನು ಕೇವಲ ಶ್ರದ್ಧಾ ಕೇಂದ್ರವಷ್ಟೇ ಆಗಿಸದೆ, ಸ್ವಚ್ಛತಾ ಹಾಗೂ ಆರೋಗ್ಯಕರ ತಾಣಗಳನ್ನಾಗಿ ರೂಪಿಸಲಾಗುವುದು ಎಂದು ಹೇಳಿದ್ದಾರೆ