ದಾವಣಗೆರೆ: ಜಿಲ್ಲೆಯಲ್ಲಿ ಮಳೆ ಅಭಾವದಿಂದ ಈರುಳ್ಳಿ ಬೆಳೆ ಕುಂಠಿತವಾಗಿದೆ. ಇದರ ಪರಿಣಾಮ, ಸ್ಥಳೀಯ ಮಾರುಕಟ್ಟೆಯಲ್ಲಿ ಮಹಾರಾಷ್ಟ್ರದ ನಾಸಿಕ್ ಈರುಳ್ಳಿಯದ್ದೇ ದರ್ಬಾರ್ ಮುಂದುವರೆದಿದೆ.
ಸಾಮಾನ್ಯವಾಗಿ ಗಣೇಶ ಹಬ್ಬ ಹಾಗೂ ದಸರಾ ನಂತರ ಈರುಳ್ಳಿ ಬೆಲೆ ಗಗನಕ್ಕೇರುತ್ತಿತ್ತು. ಈ ಬಾರಿ ಅದಕ್ಕೂ ಮುನ್ನವೇ ಬೆಲೆ ಏರಿದೆ. ಸ್ಥಳೀಯವಾಗಿ ಈರುಳ್ಳಿ ಬೆಳೆಯಲು ಮಳೆ ಕೊರತೆಯಾಗಿದೆ. ದಾವಣಗೆರೆಗೆ ನಾಸಿಕ್ ಈರುಳ್ಳಿ ಲಗ್ಗೆಯಿಟ್ಟಿದ್ದು, ಕೆಜಿಗೆ 27 ರೂಪಾಯಿಗೆ ಮಾರಾಟವಾಗುತ್ತಿದೆ.
ಟೊಮೆಟೊ ಬಳಿಕ ಈರುಳ್ಳಿ ಬೆಲೆ ಗಗನಕ್ಕೇರಲಿದೆ ಎಂಬುದನ್ನು ಮನಗಂಡು ಹಲವು ರೈತರು ಈರುಳ್ಳಿ ಬೆಳೆದಿದ್ದಾರೆ. ಆದರೆ ಮಳೆ ಅಭಾವದಿಂದ ಬೆಳೆ ನೆಲಕಚ್ಚಿದೆ. ಇದರಿಂದಾಗಿ ಜಿಲ್ಲೆಯ ಮಾರುಕಟ್ಟೆಗೆ ಸ್ಥಳೀಯವಾಗಿ ಬೆಳೆದ ಈರುಳ್ಳಿ ಬರುತ್ತಿಲ್ಲ. ಇದರ ಬದಲು ಮಾರುಕಟ್ಟೆಯಲ್ಲಿ ಸ್ಥಳೀಯ ಈರುಳ್ಳಿಯ ಸ್ಥಾನವನ್ನು ಮಹಾರಾಷ್ಟ್ರದ ನಾಸಿಕ್ ಈರುಳ್ಳಿ ಆಕ್ರಮಿಸಿಕೊಂಡಿದೆ. ಮಹಾರಾಷ್ಟ್ರದ ರೈತರು ಈರುಳ್ಳಿ ಬೆಳೆದು ದಾಸ್ತಾನಿಟ್ಟು ಒಳ್ಳೆಯ ಬೆಲೆಗಾಗಿ ಕಾದು ಕುಳಿತಿದ್ದರು. ಬೆಲೆ ಏರುತ್ತಿದ್ದಂತೆ ಫಸಲನ್ನು ದಾವಣಗೆರೆಗೆ ರಫ್ತು ಮಾಡುತ್ತಿದ್ದಾರೆ. ಇದರಿಂದ ಮಾರುಕಟ್ಟೆಯಲ್ಲಿ ನಾಸಿಕ್ ಈರುಳ್ಳಿ ಸಿಗುತ್ತಿದೆ. ಸ್ಥಳೀಯ ಬೆಳೆ ಕಣ್ಮರೆಯಾಗಿದೆ ಎಂದು ರೈತರು ದೂರಿದರು.
ಈರುಳ್ಳಿ ದಲ್ಲಾಳಿಗಳ ಸಂಘದ ಅಧ್ಯಕ್ಷ ಬಸವಲಿಂಗಪ್ಪ ಹೇಳಿದ್ದೇನು?: ”ರಾಜ್ಯದಲ್ಲಿ ಮಳೆ ಅಭಾವ ಹಾಗೂ ಬೆಳೆಗೆ ರೋಗ ಬಾಧೆ ಕಾಣಿಸಿಕೊಂಡಿದ್ದರಿಂದ ನಿರೀಕ್ಷೆಯ ಈರುಳ್ಳಿ ಫಸಲು ರೈತರ ಕೈಸೇರಿಲ್ಲ. ಒಂದು ಕೆ.ಜಿ ಒಳ್ಳೆಯ ಈರುಳ್ಳಿಗೆ ಪ್ರಸ್ತುತ 25 ರಿಂದ 27 ರೂಪಾಯಿ ಇದೆ. ಎರಡನೇ ದರ್ಜೆಯ ಈರುಳ್ಳಿ ಬೆಲೆ 24 ರೂಪಾಯಿ ನಿಗದಿ ಮಾಡಲಾಗಿದೆ. ಗಣೇಶ ಹಾಗೂ ದಸರಾ ಬಳಿಕ ಮತ್ತಷ್ಟು ಬೆಲೆ ಹೆಚ್ಚಾಗುವ ಸಾಧ್ಯತೆ ಇದೆ. ಈಗಾಗಲೇ ಶೇ 40ರಷ್ಟು ಈರುಳ್ಳಿ ಮಾರುಕಟ್ಟೆಗೆ ಬರಬೇಕಾಗಿತ್ತು. ಆದ್ರೆ, ಶೇಕಡಾ 10ರಷ್ಟು ಬರುತ್ತಿದೆ. ಪ್ರಸ್ತುತ ರಾಜ್ಯಕ್ಕೆ ಮಹಾರಾಷ್ಟ್ರದ ಈರುಳ್ಳಿಯೇ ಗತಿ. ಇಷ್ಟೊತ್ತಿಗೆ ಬೆಲೆ 40 ರೂಪಾಯಿ ಗಡಿ ದಾಟಬೇಕಾಗಿತ್ತು. ಕೇಂದ್ರ ಸರ್ಕಾರ ರಫ್ತು ಮೇಲೆ ತೆರಿಗೆ ಹೇರಿದ್ದರಿಂದ ಬೆಲೆ ಕುಸಿತ ಕಂಡಿದೆ. ವ್ಯಾಪಾರಗಳು ಕೂಡ ಸಮಸ್ಯೆಗೆ ಸಿಲುಕಿದ್ದಾರೆ” ಎಂದು ಈರುಳ್ಳಿ ದಲ್ಲಾಳಿಗಳ ಸಂಘದ ಅಧ್ಯಕ್ಷ ಬಸವಲಿಂಗಪ್ಪ ಹೇಳಿದರು.
ಮಹಾರಾಷ್ಟ್ರದ ರೈತನ ಪ್ರತಿಕ್ರಿಯೆ: ಮಹಾರಾಷ್ಟ್ರದ ರೈತ ಸೋಮನಾಥ ಪ್ರತಿಕ್ರಿಯಿಸಿ, ”ನಾನು ಮಹಾರಾಷ್ಟ್ರದ ಸತಾರದಿಂದ ಬಂದಿದ್ದೇನೆ. ಬೆಲೆ ಏರಿಕೆ ಆಗುತ್ತದೆ ಎಂದು ಈರುಳ್ಳಿ ಸ್ಟಾಕ್ ಮಾಡಿದ್ದೆ. ಆದ್ರೆ ಕೇಂದ್ರ ಸರ್ಕಾರ ಈರುಳ್ಳಿ ರಫ್ತು ರದ್ದು ಮಾಡಿ ಅದರ ಮೇಲೆ ತೆರಿಗೆ ವಿಧಿಸಿದ್ದರಿಂದ ಬೆಲೆ ಇಳಿಕೆಯಾಗಿದೆ. ಕೇಂದ್ರ ವಿಧಿಸಿರುವ ತೆರಿಗೆಯನ್ನು ಕಡಿಮೆ ಮಾಡ್ಬೇಕಾಗಿದೆ. ನಾನು ಮೂರು ಎಕರೆಯಲ್ಲಿ 270 ಚೀಲ ಈರುಳ್ಳಿ ಬೆಳೆದಿದ್ದೇನೆ. ಇಲ್ಲಿನ ಮಾರುಕಟ್ಟೆಯಲ್ಲಿ 22ರಿಂದ 26 ರೂಪಾಯಿ ಬೆಲೆ ಇದೆ. ಇದರಿಂದ ದಾವಣಗೆರೆ ಮಾರುಕಟ್ಟೆಗೆ ಈರುಳ್ಳಿ ತಂದಿದ್ದೇನೆ. ನಾವು ಬೆಳೆದ ಈರುಳ್ಳಿಯನ್ನು ಕರ್ನಾಟಕದ ಬೆಂಗಳೂರು, ಹುಬ್ಬಳ್ಳಿ, ದಾವಣಗೆರೆಗೆ ಹೆಚ್ಚು ರಫ್ತು ಮಾಡುತ್ತೇವೆ” ಎಂದು ತಿಳಿಸಿದರು.