ಹಾವೇರಿ: ಇಲ್ಲಿನಗುತ್ತಲ ಪಟ್ಟಣದಲ್ಲೊಂದು ಗಣಪತಿ ತಯಾರಿಸುವ ವಿಶೇಷ ಅನ್ನಿಸುವ ಕುಟುಂಬವಿದೆ.
ನೆಗಳೂರುಮಠ ಎಂಬ ಹೆಸರಿನ ಕುಟುಂಬದ ಸುಮಾರು 15 ಮಂದಿ ಗಣಪತಿ ವಿಗ್ರಹ ತಯಾರಿಸುತ್ತಾರೆ. ಮೂರ್ತಿ ಸಿದ್ಧಪಡಿಸುವ ಈ ಕಲಾವಿದರೆಲ್ಲರೂ ಸರ್ಕಾರಿ ನೌಕರಿಯಲ್ಲಿದ್ದಾರೆ.
ಗಣೇಶೋತ್ಸವಕ್ಕೆ ಈ ಮನೆಯ ಅಳಿಯಂದಿರು, ಸೊಸೆಯಂದಿರು, ಮಕ್ಕಳು, ಮೊಮ್ಮಕ್ಕಳು ಒಟ್ಟು ಸೇರಿದರೆ ಇವರ ಸಂಖ್ಯೆ 25 ದಾಟುತ್ತದೆ. ಹಬ್ಬ ಸಮೀಪಿಸುತ್ತಿದ್ದಂತೆ ಸರ್ಕಾರಿ ಕೆಲಸಕ್ಕೆ ರಜೆ ಹಾಕುವ ಇವರು ವಿಘ್ನವಿನಾಶಕನ ತಯಾರಿಯಲ್ಲಿ ಸಂಪೂರ್ಣವಾಗಿ ತೊಡುಗುತ್ತಾರೆ. ಯುಗಾದಿಯಂದು ಗಣೇಶ ಮೂರ್ತಿಗಳ ತಯಾರಿಕೆ ಕೆಲಸ ಆರಂಭಿಸುವ ಇವರು 150 ರಿಂದ 200 ಸಾಮಾನ್ಯ ಗಣೇಶ ಮೂರ್ತಿಗಳನ್ನು ತಯಾರಿಸುತ್ತಾರೆ. ಸಾರ್ವಜನಿಕ ಸ್ಥಳಗಳಲ್ಲಿ ಸ್ಥಾಪಿಸುವ ದೊಡ್ಡ ದೊಡ್ಡ ಮೂರ್ತಿಗಳನ್ನೂ ಸಿದ್ಧಪಡಿಸುತ್ತಾರೆ.
ನೆಗಳೂರುಮಠ ಕುಟುಂಬಗಣೇಶ ಮೂರ್ತಿಗಳಿಗೆ ಇವರು ಇಂತಿಷ್ಟೇ ಎಂದು ಬೆಲೆ ನಿಗದಿ ಮಾಡುವುದಿಲ್ಲ. ಗ್ರಾಹಕರು ತಮಗೆ ತಿಳಿದಷ್ಟು ಹಣ ನೀಡಿ ಮೂರ್ತಿ ತೆಗೆದುಕೊಂಡು ಹೋಗಬಹುದಂತೆ. ಈ ಕುರಿತು ಮಾತನಾಡಿದ ಕುಟುಂಬದ ಸದಸ್ಯರು, “ನಮಗೆ ಇದೊಂದು ಕಲೆ. ಈ ಕಲೆ ನಮ್ಮ ಕುಟುಂಬದಿಂದ ಮರೆಯಾಗಬಾರದು ಎಂದು ಗಣೇಶಮೂರ್ತಿ ತಯಾರಿಸುತ್ತೇವೆ. ನಮ್ಮ ತಂದೆಯ ಕಾಲದಿಂದ ನಾವು ಮೂರ್ತಿ ತಯಾರಿಸಿಕೊಂಡು ಬಂದಿದ್ದೇವೆ. ಇದರಿಂದ ನಮ್ಮ ಕುಟುಂಬಕ್ಕೆ ಒಳ್ಳೆಯದಾಗಿದೆ. ಮುಂದೆಯೂ ಈ ಕಲೆ ಉಳಿಸಿಕೊಂಡು ಹೋಗುತ್ತೇವೆ” ಎಂದರು.
Laxmi News 24×7