ಗೋಕಾಕ: ಡಿಸಿಸಿ ಬ್ಯಾಂಕ್ ಚುನಾವಣೆ ಎಂಇಎಸ್ ಮುಖಂಡರಿಗೆ ಬಿಜೆಪಿ ಬೆಂಬಲ ನೀಡುತ್ತಿರುವ ವಿಚಾರವಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಪ್ರತಿಕ್ರಿಯಿಸಿದ್ದು, ಸತತವಾಗಿ ಕರ್ನಾಟಕದ ವಿರುದ್ದ ಹೋರಾಟ ಮಾಡುವವರಿಗೆ ಬೆಂಬಲ ನೀಡುವ ಮುನ್ನ 10 ಬಾರಿ ಯೋಚನೆ ಮಾಡಲಿ ಎಂದು ಹೇಳಿದ್ದಾರೆ.
ನಗರದ ತಮ್ಮ ಹಿಲ್ ಗಾರ್ಡನ್ ನಿವಾಸದಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯೋತ್ಸವ ದಿನದಂದು ಕರಾಳ ದಿನಾಚರಣೆಯಲ್ಲಿ ಭಾಗಿಯಾಗುವ ವಿರೋಧಿಗಳಿಗೆ ಒಂದು ರಾಜಕೀಯ ಪಕ್ಷ ಆಹ್ವಾನ ನೀಡಲು ಮುಂದಾಗಿದೆ. ಹಲವು ವರ್ಷಗಳಿಂದ ಕರ್ನಾಟಕದ ನಿಲುವು ಭಾಷೆ, ಜನಗಳನ್ನು ವಿರೋಧಿಸುತ್ತಿರುವ ಎಂಇಎಸ್ ನಾಯಕರಿಗೆ ಒಂದು ರಾಷ್ಟ್ರೀಯ ಪಕ್ಷ ಆಹ್ವಾನ ನೀಡುವ ಮುನ್ನ ಪರ ವಿರೋಧ ಬಗ್ಗೆ ಚರ್ಚಿಸಲಿ ಎಂದಿದ್ದಾರೆ.
ಹಿಂದೆ ನಡೆದ ಘಟನೆಗಳನ್ನು ಜಿಲ್ಲೆಯ ಮಂತ್ರಿಗಳು ಮೆಲುಕು ಹಾಕಲಿ. ಬೆಂಬಲ ನೀಡುವುದು ಆ ಪಕ್ಷದ ನಿರ್ಧಾರ. ಆದ್ರೂ ಕೂಡ ಇವರು(ಎಂಇಎಸ್)ನವರು ರಾಜ್ಯಕ್ಕೆ ಅನ್ಯಾಯ ಮಾಡಿದ್ದಾರೆ ಎನ್ನುವುದನ್ನು ಮರೆಯದಿರಿ ಎಂದು ಸಲಹೆ ನೀಡಿದ್ದಾರೆ.
ನೇಕಾರ ಸೀರೆ ಖರೀದಿ ಮಾಡುವುದಾಗಿ ಹೇಳಿದ ಸರ್ಕಾರ ಈಗ ಈ ನಿರ್ಧಾರದಿಂದ ಹಿಂದೆ ಸರಿದಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ಸರ್ಕಾರ ಈ ರೀತಿ ಮಾಡುತ್ತಿರುವುದು ಹೊಸದೇನಲ್ಲ. ಮುಂಚಿನಿಂದಲೂ ಜನರಿಗೆ ಸುಳ್ಳು ಭರವಸೆ ನೀಡಿ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ಮಾರುಕಟ್ಟೆ ನೀಡುವುದಾಗಿ ಭರವಸೆ ನೀಡಿ ನೇಕಾರರನ್ನು ದಾರಿ ತಪ್ಪಿಸಿದೆ. ತುಂಬಾ ಆಸೆಯಿಂದ ಹೆಚ್ಚಿನ ಸೀರೆ ನೇಯ್ದಿದ್ದಾರೆ. ಇದೀಗ ಖಜಾನೆ ಖಾಲಿ ಹೆಸರಿನಲ್ಲಿ ಸರ್ಜಾರ ಹಿಂದೆ ಸರಿದ ಹಿನ್ನೆಲೆಯಲ್ಲಿ ನೇಕಾರರಿಗೆ ದೊಡ್ಡ ಹೊಡೆತ ಬಿದ್ದಿದೆ. ಅವರಿಗೆ ನ್ಯಾಯ ಕೊಡಿಸುವ ಪ್ರಯತ್ನ ಮಾಡುವುದಾಗಿ ತಿಳಿಸಿದರು.
Laxmi News 24×7