ಬೆಂಗಳೂರು: ಅತ್ಯುತ್ತಮ ಕೈಗಾರಿಕಾ ನೀತಿ, ಮೂಲ ಸೌಕರ್ಯ, ಮಾನವ ಸಂವನ್ಮೂಲ, ಪರಿಸರದಿಂದಾಗಿ ಕರ್ನಾಟಕ ರಾಜ್ಯ ಭಾರತದಲ್ಲೇ ಬಂಡವಾಳ ಹೂಡಿಕೆದಾರರ ನೆಚ್ಚಿನ ತಾಣವಾಗಿದೆ. ಕರ್ನಾಟಕ ಎಂದರೆ ಕೇವಲ ಬೆಂಗಳೂರು ಮಾತ್ರವಲ್ಲ, ಮೈಸೂರು, ಹುಬ್ಭಳ್ಳಿ, ಮಂಗಳೂರು, ಬೆಳಗಾವಿ ನಗರಗಳಲ್ಲಿ ಬಂಡವಾಳ ಹೂಡಿಕೆಗೆ ಅಗತ್ಯ ನೆರವು ನೀಡಲಾಗುವುದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ನೆದರ್ಲೆಂಡ್ಸ್ ಪ್ರಧಾನಿಯೊಂದಿಗೆ ಕಾಂಗ್ರೆಸ್ ನಾಯಕರು
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು ನೆದರ್ಲೆಂಡ್ ಪ್ರಧಾನ ಮಂತ್ರಿ ಮಾರ್ಕ್ ರುಟ್ಟೆ ಹಾಗೂ ಆ ದೇಶದ ಕಂಪನಿಗಳ ಪ್ರಮುಖರ ಜೊತೆ ಸಭೆ ನಡೆಸಿದ ನಂತರ ಮಾತನಾಡಿದ ಡಿಕೆಶಿ, ಕರ್ನಾಟಕ ರಾಜ್ಯ ನೆದರ್ಲೆಂಡ್ ಜತೆಗೆ ಉತ್ತಮ ಬಾಂಧವ್ಯ ಹೊಂದಿದ್ದು, ಸಂಬಂಧವನ್ನು ಇನ್ನಷ್ಟು ವೃದ್ಧಿಗೊಳಿಸಲು ನಾವು ಬಯಸುತ್ತೇವೆ. ಕರ್ನಾಟಕ ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮಾಡುತ್ತಿರುವವರ ಪೈಕಿ ಡಚ್ ಉದ್ಯಮಿಗಳು ಪ್ರಮುಖರಾಗಿದ್ದಾರೆ. ಭಾರತದಲ್ಲಿ ನೆದರ್ಲೆಂಡ್ ಉದ್ಯಮಿಗಳ ಬಂಡವಾಳ ಹೂಡಿಕೆಯಲ್ಲಿ ಕರ್ನಾಟ ರಾಜ್ಯ ಶೇ.9ರಷ್ಟು ಬಂಡವಾಳವನ್ನು ಪಡೆದಿದೆ. ರಾಜ್ಯದಲ್ಲಿ 25ಕ್ಕೂ ಹೆಚ್ಚು ಡಚ್ ಕಂಪನಿಗಳು ಹೂಡಿಕೆ ಮಾಡಿವೆ. ಶೆಲ್ ಹಾಗೂ ಫಿಲಿಪ್ಸ್ ಕಂಪನಿಗಳ ಜಾಗತಿಕ ಕೇಂದ್ರಗಳು ಕರ್ನಾಟಕದಲ್ಲಿವೆ ಎಂದರು.
ನೆದರ್ಲೆಂಡ್ಸ್ ಪ್ರಧಾನಿಯೊಂದಿಗೆ ಸಭೆ
ಹೂಡಿಕೆದಾರರ ಸ್ನೇಹಿ ವಾತಾವರಣ ನಿರ್ಮಾಣ: ರಾಜ್ಯದಲ್ಲಿ ಬಂಡವಾಳ ಹೂಡಿಕೆದಾರರ ಸ್ನೇಹಿ ವಾತಾವರಣ ನಿರ್ಮಾಣಕ್ಕೆ ಸರ್ಕಾರ ಅನೇಕ ಕ್ರಮಗಳನ್ನು ಕೈಗೊಂಡಿದ್ದು, 2022-23ನೇ ಆರ್ಥಿಕ ವರ್ಷದಲ್ಲಿ ಕರ್ನಾಟಕ ದೇಶದಲ್ಲೇ 2ನೇ ಅತಿದೊಡ್ಡ ವಿದೇಶಿ ಬಂಡವಾಳ ಹೂಡಿಕೆ ಆಕರ್ಷಿಸಿದೆ. ಆಮೂಲಕ ದೇಶದಲ್ಲಿನ ಹೂಡಿಕೆಯಲ್ಲಿ ಶೇ.25ರಷ್ಟು ಹೂಡಿಕೆ ಕರ್ನಾಟಕ ರಾಜ್ಯದಲ್ಲಿ ಆಗಿದೆ. ರಾಜ್ಯದಲ್ಲಿ 200ಕ್ಕೂ ಹೆಚ್ಚು ನೆದರ್ಲೆಂಡ್ ಕಂಪನಿಗಳು 1 ಬಿಲಿಯನ್ ಅಮೆರಿಕನ್ ಡಾಲರ್ ಮೊತ್ತ ಹೂಡಿಕೆ ಮಾಡಿ ಕಾರ್ಯನಿರ್ವಹಣೆ ಮಾಡುತ್ತಿವೆ. ಡಚ್ ಕಂಪನಿಗಳ ಜತೆಗಿನ ಈ ಬಾಂಧವ್ಯವನ್ನು ಮತ್ತಷ್ಟು ಸಧೃಡಗೊಳಿಸಲು ನಾವು ಉತ್ಸುಕರಾಗಿದ್ದೇವೆ. ಕರ್ನಾಟಕ ಹಾಗೂ ನೆದರ್ಲೆಂಡ್ ದೇಶ ಆಹಾರ ಉತ್ಪನ್ನ, ಜೈವಿಕ ತಂತ್ರಜ್ಞಾನ, ಫಾರ್ಮಾ, ಇನ್ನೋವೇಷನ್ ಮತ್ತು ಸಂಶೋಧನೆ ಮತ್ತು ಅಭಿವೃದ್ಧಿ ಸೇರಿದಂತೆ ಅನೇಕ ವಿಚಾರಗಳಲ್ಲಿ ಸಾಮ್ಯತೆಗಳನ್ನು ಹೊಂದಿವೆ ಎಂದು ಹೇಳಿದರು