Breaking News

2ಎ‌ ಮೀಸಲಾತಿ ಸಲುವಾಗಿ ಮತ್ತೆ ಹೋರಾಟ: ಬಸವಜಯ ಮೃತ್ಯುಂಜಯ ಸ್ವಾಮೀಜಿ

Spread the love

ಬೆಳಗಾವಿ: ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಪ್ರವರ್ಗ 2ಎ‌ ಮೀಸಲಾತಿ ನೀಡಬೇಕು, ಸಮಾಜದ ಎಲ್ಲ ಉಪ ಪಂಗಡಗಳನ್ನು ಕೇಂದ್ರ ಸರ್ಕಾರದ ಒಬಿಸಿ ಮೀಸಲಾತಿ ಪಟ್ಟಿಗೆ ಸೇರಿಸಲು ಶಿಫಾರಸು ಮಾಡಬೇಕು ಎಂದು ಆಗ್ರಹಿಸಿ ಸೆಪ್ಟೆಂಬರ್‌ 10 ರಂದು ನಿಪ್ಪಾಣಿಯಲ್ಲಿ ಹೋರಾಟಕ್ಕೆ ಚಾಲನೆ ನೀಡಲಾಗುತ್ತದೆ ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದ್ದಾರೆ.

 

ನಗರದ ಗಾಂಧಿ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಮ್ಮ ಬೇಡಿಕೆ ಈಡೇರಿಸುವಂತೆ ಸಮಾಜದ ಶಾಸಕರೊಂದಿಗೆ ಸೇರಿ ಮುಖ್ಯಮಂತ್ರಿಗಳನ್ನು ಭೇಟಿಯಾಗಿದ್ದೆವು. ಬಜೆಟ್ ಅಧಿವೇಶನದ ಬಳಿಕ ಸಭೆ ಮಾಡುತ್ತೇವೆ ಎಂದು ಭರವಸೆ ನೀಡಿದ್ದರು. ಆದರೆ, ಈವರೆಗೂ ಯಾವುದೇ ಕ್ರಮಕ್ಕೆ ಸರ್ಕಾರ ಮುಂದಾಗಿಲ್ಲ. ಹಾಗಾಗಿ ಮತ್ತೊಂದು‌ ಸುತ್ತಿ‌ನ ಪ್ರತಿಭಟನೆಗೆ ನಿರ್ಧರಿಸಿದ್ದೇವೆ.

ಸೆ.10 ರಂದು ಶ್ರಾವಣ ಮಾಸದ ನಿಮಿತ್ತ ಗಡಿಭಾಗದ ನಿಪ್ಪಾಣಿ ತಾಲೂಕಿನಿಂದ ಸಾಮೂಹಿಕ ಇಷ್ಟಲಿಂಗ ಪೂಜೆಯೊಂದಿಗೆ ಹೋರಾಟಕ್ಕೆ ಚಾಲನೆ ನೀಡುತ್ತೇವೆ. ನಿಪ್ಪಾಣಿಯಲ್ಲಿ ರಾಣಿ ಚನ್ನಮ್ಮ, ಬಸವೇಶ್ವರ, ಶಿವಾಜಿ ಮಹಾರಾಜರು ಹಾಗೂ ರೈತ ಹುತಾತ್ಮ ಸ್ಮಾರಕಕ್ಕೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸುತ್ತೇವೆ. 10 ಸಾವಿರಕ್ಕಿಂತ ಹೆಚ್ಚು ಜನ ಭಾಗವಹಿಸಲಿದ್ದಾರೆ. ಅಂತಿಮವಾಗಿ ಕೂಡಲಸಂಗಮ ಅಥವಾ ಬೆಳಗಾವಿಯ ಸುವರ್ಣ ವಿಧಾನಸೌಧ ಮುಂಭಾಗದಲ್ಲಿ ಹೋರಾಟ ಸಮಾರೋಪಗೊಳಿಸುತ್ತೇವೆ ಎಂದರು.

ಬೆಳಗಾವಿ, ಬಾಗಲಕೋಟೆ, ವಿಜಯಪುರ ಹಾಗು ಧಾರವಾಡ ಸೇರಿ 21 ಜಿಲ್ಲೆಗಳಲ್ಲಿ ಇಷ್ಟಲಿಂಗ ಪೂಜೆ ಮೂಲಕ ಹೋರಾಟ‌ ನಡೆಯಲಿದೆ. ನಾವು ಆಧ್ಯಾತ್ಮಿಕ ನೆಲೆಗಟ್ಟಿನಲ್ಲಿ‌ ಹೋರಾಟ ಮಾಡಲಿದ್ದೇವೆ. ಲೋಕಸಭೆ ಚುನಾವಣೆಯೊಳಗೆ ನಮ್ಮ ಬೇಡಿಕೆ ಈಡೇರಿಸಬೇಕು. ಮೀಸಲಾತಿ ವಿಚಾರವಾಗಿ ನ್ಯಾಯಾಲಯದಲ್ಲಿರುವ ಪ್ರಕರಣದ ತೊಡಕುಗಳನ್ನು ಸರ್ಕಾರವೇ ನಿವಾರಿಸಬೇಕು.

2002 ರಿಂದ ಬಾಕಿ ಇರುವ ಒಬಿಸಿ ಮೀಸಲಾತಿ ವರದಿಯನ್ನು ಕೇಂದ್ರಕ್ಕೆ ಶಿಫಾರಸು ಮಾಡಲು ಯಾವುದೇ ತೊಂದರೆ ಇಲ್ಲ. ಈ ಬಗ್ಗೆ ತಕ್ಷಣವೇ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು. ನಾವು ಯಾವುದೇ ರೀತಿ‌ ಹಿಂಸಾತ್ಮಕ ಪ್ರತಿಭಟನೆ ಮಾಡುವುದಿಲ್ಲ. ಶಾಂತಿ ಮೂಲಕವೇ ಕ್ರಾಂತಿ ಮಾಡುತ್ತೇವೆ ಎಂದು ವಿವರಿಸಿದರು.

ರೈತರು ಹಣಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂಬ ಸಚಿವ ಶಿವಾನಂದ ಪಾಟೀಲ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸ್ವಾಮೀಜಿ, ಆ ರೀತಿ ಸಚಿವರು ಮಾತನಾಡಬಾರದು. ಯಾವ ಗಳಿಗೆಯಲ್ಲಿ ಹೀಗೆ ಮಾತಾಡಿದ್ದಾರೆ ಅನ್ನೋದು ಗೊತ್ತಿಲ್ಲ. ತಮ್ಮ ಹೇಳಿಕೆಯನ್ನು ಹಿಂಪಡೆಯುವಂತೆ ಸಲಹೆ ನೀಡುತ್ತೇವೆ ಎಂದರು.

ಸುದ್ದಿಗೋಷ್ಠಿಯಲ್ಲಿ ಪಂಚಮಸಾಲಿ ಸಮಾಜದ ಗೌರವ ಜಿಲ್ಲಾಧ್ಯಕ್ಷ ಆರ್.ಕೆ.ಪಾಟೀಲ, ನಗರ ಅಧ್ಯಕ್ಷ ಶಿವಾನಂದ ತಂಬಾಕಿ ಹಾಗು ರಾಜು ಮಗದುಮ್ಮ ಇದ್ದರು.


Spread the love

About Laxminews 24x7

Check Also

ಗೋಕಾಕ: ತಾಲೂಕಿನ ಪಾಮಲದಿನ್ನಿ ಗ್ರಾಮದಲ್ಲಿ 15ಜನರು ಸೇರಿಕೊಂಡು ಬಸಪ್ಪ ಎಂಬ ಕುಟುಂಬದ ಮೇಲೆ ಹಲ್ಲೆ.

Spread the love ಗೋಕಾಕ: ತಾಲೂಕಿನ ಪಾಮಲದಿನ್ನಿ ಗ್ರಾಮದಲ್ಲಿ 15ಜನರು ಸೇರಿಕೊಂಡು ಬಸಪ್ಪ ಎಂಬ ಕುಟುಂಬದ ಮೇಲೆ ಹಲ್ಲೆ. ಮನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ