ಹುಬ್ಬಳ್ಳಿ: ಒಂದು ದೇಶ ಒಂದು ಚುನಾವಣೆ ನಡೆದರೇ ಒಳ್ಳೆಯದು. ಆದರೆ, ಭಾರತ ವಿಭಿನ್ನ ಸಂಸ್ಕೃತಿಯ ದೇಶ. ಹೀಗಾಗಿ ಇದು ಇಂಪ್ರ್ಯಾಕ್ಟಿಕಲ್ ಆಗಿದೆ ಎಂದು ಮಾಜಿ ಸಿಎಂ ಹಾಗೂ ವಿಪ ಸದಸ್ಯ ಜಗದೀಶ್ ಶೆಟ್ಟರ್ ಅಭಿಪ್ರಾಯಪಟ್ಟಿದ್ದಾರೆ. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಮ್ಮೆಯೇ ಚುನಾವಣೆ ಆಗಬೇಕೆಂದರೇ ಸದ್ಯದ ರಾಜ್ಯ ಸರ್ಕಾರವನ್ನು ವಿಸರ್ಜಿಸಿಸಬೇಕಾ. ಹಾಗಾಗಿ ರಾಷ್ಟ್ರದಲ್ಲಿ ಒಂದು ದೇಶ ಒಂದು ಚುನಾವಣೆ ನಡೆಸಲು ಸಾಧ್ಯವಿಲ್ಲ ಎಂದರು.
ಇಂಡಿಯಾ ಭಾರತ ನಾಮಕರಣ ವಿಚಾರವಾಗಿ ಮಾತನಾಡಿ, ಭಾರತ ಎನ್ನುವುದು ಬಿಜೆಪಿಯವರಿಗೆ ಈಗ್ಯಾಕೆ ನೆನಪಾಯ್ತು. ಇಂಡಿಯಾ ವಿದೇಶದ್ದು ಎಂದು ಈಗ ಜ್ಞಾನೋದಯ ಆಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರದ್ದು ಇದು ಎರಡನೇಯ ಅವಧಿ. ಈಗ ಹೊಸದಾಗಿ ಪ್ರೆಸಿಡೆಂಟ್ ಆಫ್ ಇಂಡಿಯಾ ಶುರುವಾಗಿದೆ. ನಾವೆಲ್ಲರೂ ಭಾರತೀಯರು ಅಂತಾನೇ ಹೇಳ್ತೀವಿ ಎಂದರು.
ಮೊನ್ನೆ ಜಿ20 ಶೃಂಗಸಭೆಯ ನಿಮಿತ್ತ ರಾಷ್ಟ್ರಪತಿ ಆಯೋಜಿಸಿದ್ದ ಔತಣಕೂಟದ ಆಮಂತ್ರಣ ಪತ್ರಿಕೆಯಲ್ಲಿ ಕೇಂದ್ರ ಸರ್ಕಾರ ಪ್ರೆಸೆಡಿಂಟ್ ಆಫ್ ಭಾರತ ಎಂದು ಬರೆದಿತ್ತು. ಇವಾಗ ಯಾಕೆ ಭಾರತ ನೆನಪಾಯ್ತು. ಇವತ್ತು ಹೊಸದಾಗಿ ಯಾಕೆ ಇದು ಶುರು ಆಯ್ತು. ನನ್ನ ಅಬ್ಜಕ್ಷನ್ ಏನೂ ಇಲ್ಲ, ಆದರೆ ನಾವೆಲ್ಲ ಭಾರತೀಯರು. ವೈಯಕ್ತಿಕವಾಗಿ ನಾನು ಭಾರತ ಎನ್ನುವುದನ್ನು ಸ್ವಾಗತ ಮಾಡುತ್ತೇನೆ. ಹೊಸದಾಗಿ ಡಿಬೇಟ್ ಶರು ಮಾಡಿದ್ದೇ ಬಿಜೆಪಿ ಸರ್ಕಾರ. ಇದಕ್ಕೆಲ್ಲ ಕಾರಣ ರಾಜಕಾರಣ. ವಿಪಕ್ಷಗಳು ಇಂಡಿಯಾ ಎನ್ನುವ ಹೆಸರು ಇಟ್ಟುಕೊಂಡಿದ್ದರಿಂದ ‘ಇಂಡಿಯಾ’ ಹೆಸರಿಗೆ ಕೇಂದ್ರ ಸರ್ಕಾರ ಹೆದರಿದೆ ಅನಿಸುತ್ತೆ ಎಂದರು.