Breaking News

ಆಪರೇಷನ್​ ಹಸ್ತ ಮಾಡುವವರು ಮತ್ತು ಆಪರೇಷನ್​ ಹಸ್ತಕ್ಕೆ ಒಳಗಾಗುವವರು ಮೂರ್ಖರು :ರಮೇಶ್​ ಜಾರಕಿಹೊಳಿ

Spread the love

ಚಿಕ್ಕೋಡಿ (ಬೆಳಗಾವಿ) : ಆಪರೇಷನ್ ಹಸ್ತ ಮಾಡುವವರು ಮತ್ತು ಆಪರೇಷನ್ ಹಸ್ತಕ್ಕೆ ಒಳಗಾಗುವವರು ಮೂರ್ಖರು.

ಆಪರೇಷನ್ ಹಸ್ತ​ ನಡೆಸುವುದು ಸರ್ಕಾರಕ್ಕೆ ಶೋಭೆ ತರುವುದಿಲ್ಲ ಎಂದು ಮಾಜಿ ಸಚಿವ, ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಆಪರೇಷನ್ ಕಮಲ ಮಾಡಿದಾಗ ಒಂದು ಅರ್ಥ ಇತ್ತು. ಆಗ ಸರ್ಕಾರಕ್ಕೆ ಪೂರ್ಣ ಬಹುಮತ ಇರಲಿಲ್ಲ. ಬಿಜೆಪಿಯವರು ನಮಗೆ ಆಹ್ವಾನ ನೀಡಿರಲಿಲ್ಲ. ನಮ್ಮ ಸ್ವಂತ ನಿರ್ಣಯದಿಂದ ನಾವು ಬಿಜೆಪಿಗೆ ಹೋಗಿದ್ದೆವು. ಕಾಂಗ್ರೆಸ್​ನಲ್ಲಿ ಆದ ಅನ್ಯಾಯದಿಂದ ಬೇಸತ್ತು ನಾವಾಗೇ ಹೊರಬಂದಿದ್ದೆವು. ಈಗ ಆಪರೇಷನ್​ ಹಸ್ತ ಮಾಡುತ್ತಿರುವುದು ಸರ್ಕಾರಕ್ಕೆ ಶೋಭೆ ತರುವುದಿಲ್ಲ ಎಂದು ಹೇಳಿದರು.

ಡಿಕೆಶಿ ವಿರುದ್ಧ ಜಾರಕಿಹೊಳಿ ವಾಗ್ದಾಳಿ : ಕಾಂಗ್ರೆಸ್ ಸರ್ಕಾರದಲ್ಲಿ ಯಾವುದೂ ಸರಿಯಿಲ್ಲ. ಕಾಂಗ್ರೆಸ್ ಪಕ್ಷದ 25 ರಿಂದ 30 ಹಿರಿಯ ಶಾಸಕರು ಬಂಡಾಯದ ಬಾವುಟ ಹಾರಿಸಲು ಸಿದ್ದತೆ ನಡೆಸಿದ್ದರು. ಈ ಸಂಬಂಧ ಬೆಂಗಳೂರಿನ ಹೋಟೆಲ್​ ಒಂದರಲ್ಲಿ ಸಭೆ ನಡೆಸಲು ಮುಂದಾಗಿದ್ದರು. ಮರೆಮಾಚಲು ಆಪರೇಷನ್​ ಹಸ್ತ ಎಂಬುದನ್ನು ಮುನ್ನಲೆಗೆ ತರಲಾಯಿತು. ಇದು ಮಹಾನಾಯಕನ ಕುತಂತ್ರ ಎಂದು ಪರೋಕ್ಷವಾಗಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು.

ಈ ವಿಷಯ ಹೊರ ಬಂದರೆ ಕಾಂಗ್ರೆಸ್​ ಪಕ್ಷಕ್ಕೆ ಮುಜುಗರ ಆಗುತ್ತದೆ ಎಂದು ನಾಟಕ ಮಾಡಿದ್ದಾರೆ. ಕಾಂಗ್ರೆಸ್​ನ ಕೆಲ ಶಾಸಕರು ಸರ್ಕಾರದ ವಿರುದ್ಧ ಈಗಾಗಲೇ ಬಹಿರಂಗವಾಗಿ ಪತ್ರ ಬರೆದಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಏನು ನಡೆಯುತ್ತಿದೆ ಎಂಬುದು ರಾಜ್ಯದ ಜನರಿಗೆ ಗೊತ್ತಿದೆ ವಾಗ್ದಾಳಿ ನಡೆಸಿದರು.

ಲಕ್ಷ್ಮಣ ಸವದಿಯನ್ನು ಬಿಜೆಪಿಗೆ ಕರೆ ತರುವ ವಿಚಾರವಾಗಿ ಮಾತನಾಡಿ, ಶೋಭಾ ಕರಂದ್ಲಾಜೆಯಂತಹ ಕೆಲ ಸ್ವಯಂಘೋಷಿತ ನಾಯಕರು ಪ್ರಚಾರಕ್ಕೋಸ್ಕರ ಏನಾದರೂ ಹೇಳಿಕೆ ನೀಡುತ್ತಾರೆ. ಲಕ್ಷ್ಮಣ ಸವದಿ ಅವರು ಪಕ್ಷಕ್ಕೆ ತುಂಬಾ ಹಾನಿ ಮಾಡಿದ್ದಾರೆ. ಸವದಿ ಬಿಜೆಪಿ ಬರುವುದಾದರೆ ಬರಲಿ. ವೈಯಕ್ತಿಕ ಸ್ವಾಗತ ಮಾಡುತ್ತೇನೆ. ಸವದಿ ಆಗಮನ ನಮ್ಮ ಹೈಕಮಾಂಡ್ ಬಿಟ್ಟ ವಿಚಾರ ಎಂದು ತಿಳಿಸಿದರು.

ನಾನು ಬಿಜೆಪಿ ಬಿಟ್ಟು ಹೋಗುವುದಿಲ್ಲ : ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ವಿಚಾರವಾಗಿ ಮಾತನಾಡಿದ ಜಾರಕಿಹೊಳಿ, ನಾನು ಕಾಂಗ್ರೆಸ್​​ಗೆ ಮರಳಿ ಹೋಗುವುದಿಲ್ಲ. ನನ್ನ ರಾಜಕಾರಣ ಬಿಜೆಪಿಯಲ್ಲೇ ಮುಕ್ತಾಯ. ನಾನು ಬಿಜೆಪಿ ಪಕ್ಷವನ್ನು ಬಿಟ್ಟು ಎಲ್ಲೂ ಹೋಗುವುದಿಲ್ಲ. ಅಲ್ಲದೆ ಲೋಕಸಭಾ ಚುನಾವಣೆಯಲ್ಲೂ ನಾನು ಸ್ಪರ್ಧೆ ಮಾಡುವುದಿಲ್ಲ, ನಾನು ರಾಜ್ಯ ರಾಜಕಾರಣದಲ್ಲಿ ಇರುತ್ತೇನೆ. ನಮ್ಮ ಕುಟುಂಬದಿಂದ ಯಾರೇ ಕಾಂಗ್ರೆಸ್ ಪಕ್ಷದಿಂದ ಸ್ವರ್ಧೆ ಮಾಡಿದರೂ ನಾನು ಬಿಜೆಪಿ ಪರವಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.

ಸಿಎಂ ಸಿದ್ದರಾಮಯ್ಯ ಅವರಿಗೆ ಫ್ರೀ ಹ್ಯಾಂಡ್ ಇಲ್ಲ: ಸಿಎಂ ಸಿದ್ದರಾಮಯ್ಯ ಅವರ ಪರಿಸ್ಥಿತಿ ನೋಡಲು ಆಗುತ್ತಿಲ್ಲ. 2013ರಲ್ಲಿನ ಸಿದ್ದರಾಮಯ್ಯ ಇವತ್ತು ಕಾಣುತ್ತಿಲ್ಲ. ನಾನು 2013ರ ಸರ್ಕಾರದಲ್ಲಿ ಮಂತ್ರಿಯಾಗಿ ಅವರ ಜೊತೆ ಕೆಲಸವನ್ನು ಮಾಡಿದ್ದೇನೆ. ಸದ್ಯಕ್ಕೆ ಸಿಎಂ ಸಿದ್ದರಾಮಯ್ಯ ಅವರಿಗೆ ಫ್ರೀ ಹ್ಯಾಂಡ್ ಇಲ್ಲ. ಅವರ ಮುಖದಲ್ಲಿ ಖುಷಿ ಕಾಣುತ್ತಿಲ್ಲ ಎಂದರು.


Spread the love

About Laxminews 24x7

Check Also

ಜನರಲ್ಲಿ ವೈಚಾರಿಕತೆ, ವೈಜ್ಞಾನಿಕತೆ ಬೆಳೆಯದಿದ್ದರೆ, ಕೇವಲ ಮೌಢ್ಯ ನಿಷೇಧ ಕಾನೂನಿನ ಮೂಲಕ ನಿರೀಕ್ಷಿತ ಬದಲಾವಣೆ ಸಾಧ್ಯವಿಲ್ಲ ಎಂದ ಸಿಎಂ

Spread the loveಬೆಂಗಳೂರು: ”ದ್ವಿಭಾಷಾ ಸೂತ್ರ ನನ್ನ ಅಭಿಪ್ರಾಯವಾಗಿದೆ. ಅದನ್ನು ಸರ್ಕಾರದ ಅಭಿಪ್ರಾಯ ಮಾಡುವ ದಿಕ್ಕಿನಲ್ಲಿ ಪ್ರಯತ್ನಿಸುತ್ತೇನೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ