ಬೆಂಗಳೂರು : ದೇಶದ ಸರ್ಕಾರಿ ಸ್ವಾಮ್ಯದ ರಸ್ತೆ ಸಾರಿಗೆ ಸಂಸ್ಥೆಗಳ ನಿರ್ವಹಣೆಯಲ್ಲಿ ಪ್ರಶಸ್ತಿಗಳ ಬೇಟೆಯನ್ನು ಮುಂದುವರೆಸಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಪ್ರತಿಷ್ಠಿತ ಸಪ್ಲೈ ಚೈನ್ ಲೀಡರ್ ಶಿಪ್ ಪ್ರಶಸ್ತಿ ಲಭಿಸಿದೆ.
ಇದರ ಜೊತೆಗೆ ಎಕ್ಸ್ ಪ್ರೆಸ್ ಲಾಜಿಸ್ಟಿಕ್ ಪ್ರಶಸ್ತಿಯೂ ಲಭಿಸಿದೆ.
ಕಾಮಿಕಾಜೆ ಬಿ2ಬಿ ಮೀಡಿಯಾ ಪ್ರತಿಷ್ಠಾಪಿಸಿರುವ 15ನೇ ಆವೃತ್ತಿಯ ಎಕ್ಸ್ ಪ್ರೆಸ್ ಲಾಜಿಸ್ಟಿಕ್ ಮತ್ತು ಸಪ್ಲೈ ಚೈನ್ ಲೀಡರ್ ಶಿಪ್ ಪ್ರಶಸ್ತಿ ಕೆಎಸ್ಆರ್ಟಿಸಿ ಮುಡಿಗೇರಿದ್ದು, ಸೆಪ್ಟೆಂಬರ್ 14ರಂದು ಮುಂಬೈನಲ್ಲಿರುವ ತಾಜ್ ಲ್ಯಾಂಡ್ಸ್ ಎಂಡ್ನಲ್ಲಿ ನಡೆಯಲಿರುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈ ಪ್ರಶಸ್ತಿಗಳನ್ನು ಕೆಎಸ್ಆರ್ಟಿಸಿಗೆ ಪ್ರದಾನ ಮಾಡಲಾಗುತ್ತದೆ ಎಂದು ಕಾಮಿಕಾಜೆ ಬಿ2ಬಿ ಮೀಡಿಯಾ ತಿಳಿಸಿದೆ.
ಇತ್ತೀಚೆಗಷ್ಟೇ ವಿ ಕನೆಕ್ಟ್ ಇಂಡಿಯಾ ಮೀಡಿಯಾ ಅಂಡ್ ರಿಸರ್ಚ್ ಸಂಸ್ಥೆಯಿಂದ ಕೊಡಲಾಗುವ ಏಷ್ಯಾದ ಬ್ಯುಸಿನೆಸ್ ಕ್ವಾಲಿಟಿ ಪ್ರಶಸ್ತಿಗಳಲ್ಲಿ ನಾಲ್ಕು ವರ್ಗದಲ್ಲಿ ಕೆಎಸ್ಆರ್ಟಿಸಿಗೆ ಪ್ರಶಸ್ತಿಗಳು ಲಭಿಸಿದ್ದವು. ಬ್ಯ್ರಾಂಡಿಂಗ್ ಮತ್ತು ಮಾರ್ಕೆಟಿಂಗ್, ಸಾರಿಗೆ ಸುರಕ್ಷತೆ, ಕಾರ್ಮಿಕ ಸ್ನೇಹಿ ಉಪಕ್ರಮಗಳು ಹಾಗೂ ಮಾಹಿತಿ ತಂತ್ರಜ್ಞಾನ ವರ್ಗಗಳಲ್ಲಿ ನಿಗಮವು ಪ್ರಶಸ್ತಿಗೆ ಆಯ್ಕೆಯಾಗಿದೆ. ಈ ಪ್ರಶಸ್ತಿ ಪ್ರದಾನ ಸಮಾರಂಭವು ಸೆಪ್ಟೆಂಬರ್ 29ರಂದು ದೆಹಲಿಯ ರಾಡಿಸನ್ ಬ್ಲೂ ಪ್ಲಾಜಾದಲ್ಲಿ ನಡೆಯಲಿದೆ. ಇದರ ಬೆನ್ನಲ್ಲೇ ಮತ್ತೆರಡು ಪ್ರಶಸ್ತಿಗಳು ಕೆಎಸ್ಆರ್ಟಿಸಿಯನ್ನು ಹುಡುಕಿಕೊಂಡು ಬಂದಿವೆ.