ಹುಬ್ಬಳ್ಳಿ: ಟ್ರ್ಯಾಕ್ಟರ್ವೊಂದನ್ನು ರಿವರ್ಸ್ ಡ್ರೈವ್ ಮಾಡಿಕೊಂಡು ಯುವಕನೋರ್ವ ತಮ್ಮ ಮನೆದೇವರು ಯಲ್ಲಮ್ಮದೇವಿಗೆ ಹರಕೆ ತೀರಿಸಿದ್ದಾನೆ.
ತಾಲೂಕಿನ ಮಂಟೂರ ಗ್ರಾಮದ 22 ವರ್ಷದ ಯುವಕ ಬಾಬುಗೌಡ ಚಂದ್ರುಗೌಡ ಪರ್ವತಗೌಡ್ರ ಎಂಬಾತನೇ ಈ ಸಾಧನೆ ಮಾಡಿದಾತ.
ವೃತ್ತಿಯಿಂದ ಕೃಷಿಕನಾಗಿರುವ ಬಾಬುಗೌಡ ಅವರು ಐದಾರು ವರ್ಷದಿಂದ ಟ್ರ್ಯಾಕ್ಟರ್ ಚಲಾಯಿಸುತ್ತಿದ್ದಾನೆ. ಆದರೆ, ರಿವರ್ಸ್ ಗೇರ್ನಲ್ಲಿ ವಾಹನ ಚಲಾಯಿಸುವುದು, ಅಲ್ಲದೆ ಬಹುದೂರದವರೆಗೆ ತೆಗೆದುಕೊಂಡು ಹೋಗುವುದನ್ನು ಮಾಡಿರಲಿಲ್ಲ. ಬಾಬುಗೌಡ ಟ್ರ್ಯಾಕ್ಟರ್‌ಅನ್ನು ಹಿಮ್ಮುಖವಾಗಿ ಚಲಾಯಿಸಿಕೊಂಡು ಹೋಗಿ ದೇವಿ ದರ್ಶನ ಪಡೆಯುತ್ತೇನೆ ಎಂದು ಹರಕೆ ಹೊತ್ತಿದ್ದನಂತೆ. ಅದರಂತೆ ಬಾಬುಗೌಡ ಯಲ್ಲಮ್ಮದೇವಿ ದರ್ಶನಕ್ಕಾಗಿ ಸೆಪ್ಟೆಂಬರ್ 2ರಂದು ಬೆಳಗ್ಗೆ 6.15ಕ್ಕೆ ಮಂಟೂರಿನ ವಲಂಬೇಶ್ವರ ದೇವಸ್ಥಾನದಿಂದ ಹಿಮ್ಮುಖ ಪ್ರಯಾಣ ಆರಂಭಿಸಿದ್ದ.
ಕುಸುಗಲ್ಲ, ಬ್ಯಾಹಟ್ಟಿ, ತೀರ್ಲಾಪುರ, ಅಳಗವಾಡಿ, ಹಂಚಿನಾಳ, ಚಿಕ್ಕುಂಬಿ, ಹಿರೇಕುಂಬಿ ಹಾಗೂ ಉಗರಗೋಳ ಮೂಲಕ ಸವದತ್ತಿಗೆ ಹೋಗಿ, ಅಲ್ಲಿಂದ ಯಲ್ಲಮ್ಮನಗುಡ್ಡ ತಲುಪಿದ್ದ. ಮಧ್ಯಾಹ್ನ 1.30ಕ್ಕೆ ಯಲ್ಲಮ್ಮನ ಗುಡ್ಡ ಪ್ರವೇಶಿಸಿ ಹರಕೆ ತೀರಿಸಿದ. ಗುಡ್ಡದಲ್ಲಿ ಇವರನ್ನು ಸ್ವಾಗತಿಸಿದ ಗ್ರಾಮಸ್ಥರು, ಭಂಡಾರ ಹಚ್ಚಿ ಬರಮಾಡಿಕೊಂಡರು. ಸಾಧಕನಿಗೆ ಸನ್ಮಾನಿಸಿದರು. ಸುಮಾರು 75 ಕಿ.ಮೀ. ಅಂತರವನ್ನು ಒಟ್ಟು 7 ತಾಸು 30 ನಿಮಿಷದಲ್ಲಿ ಕ್ರಮಿಸುವ ಮೂಲಕ ದಾಖಲೆ ಬರೆದಿದ್ದಾನೆ.