ಧಾರವಾಡ: ಶಾಸಕ ರಾಯರೆಡ್ಡಿಯನ್ನು ಕಾಂಗ್ರೆಸ್ ಸಚಿವರಾದ ಸಚಿವ ಶರಣಪ್ರಕಾಶ್ ಪಾಟೀಲ್ ಹಾಗೂ ಎಂ ಸಿ ಸುಧಾಕರ್ ಭೇಟಿ ಆಗಿ ಚರ್ಚೆ ನಡೆಸಿದ್ದು, ಕುತೂಹಲ ಮೂಡಿಸಿದೆ. ಸಚಿವರ ಭೇಟಿ ಬಳಿಕ ಶಾಸಕ ಬಸವರಾಜ್ ರಾಯರೆಡ್ಡಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾರೆ.
‘ಕೊಪ್ಪಳ ಜಿಲ್ಲೆಯಲ್ಲಿ ಬರಗಾಲ ಆವರಿಸಿದೆ. ಈ ಸಮಯದಲ್ಲಿ ವಿದ್ಯುತ್ ಸರಿಯಾಗಿ ಸಿಗುತ್ತಿಲ್ಲ. ಟ್ರಾನ್ಸಫರ್‌ಗಳು ಬರ್ನ್ ಆಗುತ್ತಿವೆ. ಅದಕ್ಕೆ ಸರಿಯಾಗಿ ಸ್ಪಂದನೆ ಸಿಗುತ್ತಿಲ್ಲ. ಸಿಎಂ ಅವರೇ ಹಣಕಾಸು ಖಾತೆ ಹೊಂದಿದ್ದಾರೆ. ಹೀಗಾಗಿ ನಾನು ಸಿಎಂ ಅವರಿಗೆ ಈ ಕುರಿತು ಸಭೆ ಮಾಡಿ ಎಂದು ಪತ್ರ ಬರೆದಿದ್ದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಮುಂದುವರೆದು ರಾಯರೆಡ್ಡಿ, ಈ ವಿಚಾರ ಜನರಿಗೆ ತಿಳಿಯಲಿ ಎಂದು ಬರೆದಿದ್ದ ಪತ್ರವನ್ನು ಮಾಧ್ಯಮಗಳ ಮುಂದೆ ಬಿಡುಗಡೆ ಮಾಡಿದ್ದೆ. ಸೆ. 5ರಂದು (ನಾಳೆ)ಇಂಧನ ಸಚಿವರು ಸಭೆ ಕರೆದಿದ್ದಾರೆ. ನನ್ನ ಪತ್ರದಿಂದ ಈಗ ಇಡೀ ಜೆಸ್ಕಾಂ ಸಮಸ್ಯೆ ಪರಿಹಾರ ಆಗುತ್ತದೆ. ಆದರೆ ನಕರಾತ್ಮಕವಾಗಿ ತೆಗೆದುಕೊಂಡರೆ ಹೇಗೆ? ನಾನು ಕಾಂಗ್ರೆಸ್‌ನಲ್ಲಿ ಸಿಟ್ಟಾಗಿಲ್ಲ ಸಿಟ್ಟು ಆಗುವುದಂತಹುದು ಏನೂ ಇಲ್ಲ. ನಾನು ಕಾಂಗ್ರೆಸ್ ಸಹ ಬಿಡುವುದಿಲ್ಲ ಬಿಜೆಪಿಗೆ ಹೋಗಲು ನನಗೆ ತೊಂದರೆಯೂ ಇಲ್ಲ. ಆದರೆ ಬಿಜೆಪಿಯ ಐಡಿಯಾಲಜಿಗಳು ನನಗೆ ಸರಿ ಹೊಂದುವುದಿಲ್ಲ. ಬಿಜೆಪಿಯವರು ನನ್ನನ್ನು ಕರೆದಿದ್ದಾರೆ ಎಂದು ನಾನು ಹೇಳುತ್ತಿಲ್ಲ. ಬದಲಾಗಿ ಅವರು ಎಲ್ಲರನ್ನೂ ಕರೆಯುತ್ತಲೇ ಇರುತ್ತಾರೆ ಎಂದರು.