ಬೆಂಗಳೂರು : ಬಿಜೆಪಿಯಿಂದ ಅಂತರ ಕಾಯ್ದುಕೊಂಡಿರುವ ಯಶವಂತಪುರ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಅವರಿಂದು ಕಾಂಗ್ರೆಸ್ ಸರ್ಕಾರದ ಪ್ರಮುಖ ಯೋಜನೆ ಗೃಹಲಕ್ಷ್ಮಿ ಜಾರಿಗೆ ಅದ್ಧೂರಿ ಕಾರ್ಯಕ್ರಮ ಮಾಡಿದರು.
“ಗೃಹಲಕ್ಷ್ಮಿ ಯೋಜನೆ ಜಾರಿಗೆ ನನ್ನದೂ ಕೂಡಾ ಒಂದು ಅಳಿಲು ಸೇವೆ. ನನ್ನ ಕ್ಷೇತ್ರದಲ್ಲಿ ಯೋಜನೆ ಬಗ್ಗೆ ಮಾಹಿತಿ ನೀಡಲು ಏನೆಲ್ಲ ಕ್ರಮ ವಹಿಸಬಹುದೋ ಅದನ್ನು ಮಾಡುತ್ತಿದ್ದೇನೆ ಅಷ್ಟೇ” ಎಂದು ಸಮರ್ಥನೆ ನೀಡಿದರು.
ಯಶವಂತಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಾಮೋಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಗೃಹಲಕ್ಷ್ಮಿ ಯೋಜನೆಯ ಉದ್ಘಾಟನಾ ಕಾರ್ಯಕ್ರಮ ನಡೆಯಿತು. 17 ಗ್ರಾಮ ಪಂಚಾಯತ್ ಹಾಗೂ 5 ಬಿಬಿಎಂಪಿ ವಾರ್ಡ್‌ಗಳಲ್ಲೂ ಅದ್ಧೂರಿ ಕಾರ್ಯಕ್ರಮ ಆಯೋಜಿಸಿದ ಎಸ್.ಟಿ.ಸೋಮಶೇಖರ್ ಸರ್ಕಾರದ ಯೋಜನೆ ಜಾರಿಗೆ ಹೆಚ್ಚು ಕಾಳಜಿ ತೋರಿಸಿದರು.
ನಂತರ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಇದು ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ. ಈ ಯೋಜನೆಗೆ ಕ್ಷೇತ್ರದಲ್ಲಿ 24 ಸಾವಿರ ಬಿಪಿಎಲ್ ಸದಸ್ಯರು ಮಾತ್ರ ನೋಂದಣಿ ಮಾಡಿದ್ದಾರೆ. ಯೋಜನೆಯಲ್ಲಿ ಭಾಗವಹಿಸುವಂತೆ ಅಧಿಕಾರಿಗಳು ತಿಳಿಸಿದ್ದಾರೆ. ಎಲ್ಲ ಬಿಪಿಎಲ್‌ನವರೂ ನೋಂದಣಿ ಆಗಬೇಕು. ಇದರಿಂದ ಪ್ರತಿ ತಿಂಗಳು 2 ಸಾವಿರ ರೂ. ಖಾತೆಗೆ ಬರುತ್ತದೆ. ಎಪಿಎಲ್‌ನವರು 5 ಕೆ.ಜಿ ಅಕ್ಕಿ ತೆಗೆದುಕೊಳ್ಳುವವರಿಗೆ ಮಾತ್ರ ಸಿಗುತ್ತದೆ” ಎಂದು ತಿಳಿಸಿದರು.
“ಕಾಂಗ್ರೆಸ್ ಸರ್ಕಾರದ ಕಾರ್ಯಕ್ರಮವನ್ನು ಕಾಂಗ್ರೆಸ್ ಶಾಸಕರೇ ಮಾಡಬೇಕು ಅಂತೇನಿಲ್ಲ. ನಮ್ಮ ಕ್ಷೇತ್ರದಲ್ಲಿ 94 ಸಾವಿರ ಕಾರ್ಡ್‌ದಾರರೂ ನೋಂದಣಿ ಆಗಬೇಕು. ಇಲ್ಲವೆಂದರೆ ನಾಳೆ ಜನ ನನ್ನನ್ನು ಕೇಳುತ್ತಾರೆ. ಹಬ್ಬದ ರೀತಿಯಲ್ಲಿ ಈ ಕಾರ್ಯಕ್ರಮ ಮಾಡುತ್ತಿದ್ದೇವೆ. ಸರ್ಕಾರದ ಯೋಜನೆಯನ್ನು ಎಲ್ಲ ಗೃಹಿಣಿಯರಿಗೂ ತಲುಪಿಸುತ್ತೇನೆ. ಗೃಹಜ್ಯೋತಿ ಯೋಜನೆಯೂ ಸಾಕಷ್ಟು ಜನರಿಗೆ ತಲುಪುತ್ತಿರಲಿಲ್ಲ. ಕೇವಲ 40 ಸಾವಿರ ಜನರಿಗೆ ಅನುಕೂಲ ಆಗುತ್ತಿತ್ತು. ಈಗ 1.9 ಲಕ್ಷ ಜನರಿಗೆ 13 ಕೋಟಿ ರೂ. ಉಳಿತಾಯ ಆಗುತ್ತಿದೆ. ಗೃಹಜ್ಯೋತಿ ಹಾಗೂ ಗೃಹಲಕ್ಷ್ಮೀ ಯೋಜನೆ ಯಶಸ್ವಿಯಾಗಿ ಮಾಡುತ್ತೇವೆ” ಎಂದರು.
Laxmi News 24×7