ಬೆಂಗಳೂರು : ಪರಿಷತ್ತು ಸಮಸ್ತ ಕನ್ನಡಿಗರ ಪರವಾಗಿ ಮಾಡಿರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕನ್ನಡಿಗರಿಗೆ ಅವಕಾಶ ನೀಡಬೇಕು ಎನ್ನುವ ಬೇಡಿಕೆಯ ನಂತರವೂ ಕೇಂದ್ರ ಸರ್ಕಾರ ಐಬಿಪಿಎಸ್ ಪರೀಕ್ಷೆಯನ್ನು ಕನ್ನಡದಲ್ಲಿ ಬರೆಯಲು ಅವಕಾಶ ನೀಡಿಲ್ಲ ಎನ್ನುವುದು ಖೇದದ ಸಂಗತಿ.
ಕನ್ನಡ ಸಾಹಿತ್ಯ ಪರಿಷತ್ತು ಸಹಿಸುವುದಿಲ್ಲ ಎಂದು ಕಸಾಪ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ಕಿಡಿಕಾರಿದ್ದಾರೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು, ಬ್ಯಾಂಕಿಂಗ್ ಪರೀಕ್ಷೆಯಲ್ಲಿ ಕನ್ನಡ ಭಾಷೆಗೆ ಅವಕಾಶ ಕಲ್ಪಿಸದೇ ಇರುವುದು ಸಮಸ್ತ ಕನ್ನಡ ನಾಡಿಗೆ ಮಾಡುತ್ತಿರುವ ಅವಮಾನ. ಕನ್ನಡಿಗರ ಬೇಡಿಕೆಗೆ ಕವಡೆ ಕಾಸಿನ ಕಿಮ್ಮತ್ತು ನೀಡದಿರುವ ಕೇಂದ್ರ ಸರ್ಕಾರದ ಅಡಿಯಲ್ಲಿ ಇರುವ ಐಬಿಪಿಎಸ್ (ಇನ್ಸ್ಟಿಟ್ಯೂಟ್ ಫಾರ್ ಬ್ಯಾಂಕಿಂಗ್ ಝೋನಲ್ ಸೆಲೆಕ್ಷನ್) ಪರೀಕ್ಷೆಯನ್ನು ಹಿಂದಿ ಅಥವಾ ಇಂಗ್ಲಿಷ್ ಭಾಷೆಯಲ್ಲಿ ನಡೆಸುವ ಮೂಲಕ ಮಲತಾಯಿ ಧೋರಣೆ ತೋರುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೇವಲ ಹಿಂದಿ ಅಥವಾ ಇಂಗ್ಲಿಷ್ ಭಾಷೆಗಳಲ್ಲಿ ನಡೆಸುವ ಮೂಲಕ ಕನ್ನಡ ಸೇರಿದಂತೆ ದೇಶದ ಇತರ ಎಲ್ಲಾ ಪ್ರಾದೇಶಿಕ ಭಾಷಿಕರಿಗೆ ಅನ್ಯಾಯವಾಗುತ್ತಿದೆ. ಕೇವಲ ಹಿಂದಿ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಬ್ಯಾಂಕಿಂಗ್ ಪರೀಕ್ಷೆಯನ್ನು ನಡೆಸುವುದರಿಂದ ಸಾಮಾನ್ಯ ಜನರು ಅವಕಾಶ ವಂಚಿತರಾಗುತ್ತಿದ್ದಾರೆ. ಈ ಕುರಿತು ಕನ್ನಡ ಸಾಹಿತ್ಯ ಪರಿಷತ್ತು ಕೇಂದ್ರ ಸರ್ಕಾರ ಸೇರಿದಂತೆ ಇತರ ನೇಮಕಾತಿ ಸಂಸ್ಥೆಗಳಿಗೆ ಪ್ರಾದೇಶಿಕ ಭಾಷೆಗಳ ಮಹತ್ವ ಮತ್ತು ಅವುಗಳನ್ನು ಕಡೆಗಣಿಸದೇ ಇರುವಂತೆ ಎಚ್ಚರಿಕೆಯನ್ನು ನೀಡುತ್ತಲೇ ಬಂದಿದೆ. ಆದರೂ ಭಾಷಾ ಗೊಂದಲಕ್ಕೆ ಕಾರಣವಾಗುವಂತೆ ರಾಷ್ಟ್ರೀಯ ಪರೀಕ್ಷೆಯಲ್ಲಿ ಹಿಂದಿಯೇತರ ಭಾಷೆಗಳ ಕಡೆಗಣನೆ ಮಾಡಲಾಗುತ್ತಿದೆ ಎಂದಿದ್ದಾರೆ.