ಸಿನಿ ಗಣ್ಯರಿಂದ ಚಂದ್ರಯಾನ 3ರ ಯಶಸ್ಸಿಗೆ ಶುಭ ಹಾರೈಕೆ
ಚಂದ್ರಯಾನ 3ರ ಮೂಲಕ ಭಾರತ ಮತ್ತೊಂದು ಮೈಲಿಗಲ್ಲು ಸಾಧಿಸಲು ಸಜ್ಜಾಗಿದೆ.
ಇಂದು ಸಂಜೆ 6 ಗಂಟೆ 4 ನಿಮಿಷಕ್ಕೆ ಸರಿಯಾಗಿ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಇಳಿಯಲಿದೆ. ಯೋಜನೆಯಂತೆ ಎಲ್ಲವೂ ನಡೆಯಲಿದ್ದು, ದೇಶಾದ್ಯಂತ ಚಂದ್ರಯಾನ 3ರ ಯಶಸ್ಸಿಗೆ ಹೋಮ, ಹವನ, ಪೂಜೆ ನಡೆಸಲಾಗುತ್ತಿದೆ. ಮತ್ತೊಂದೆಡೆ ಸಿನಿ ಗಣ್ಯರು ಮೈಕ್ರೋ ಬ್ಲಾಗಿಂಗ್ ಸೈಟ್ X (ಟ್ವಿಟರ್) ನಲ್ಲಿ ಚಂದ್ರಯಾನ 3ರ ಯಶಸ್ಸಿಗೆ ಶುಭ ಹಾರೈಸಿದ್ದಾರೆ. ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ, ಹಿರಿಯ ನಟ ಅನುಪಮ್ ಖೇರ್, ಜನಪ್ರಿಯ ನಟ ಮಾಧವನ್ ಸೇರಿದಂತೆ ಅನೇಕರು ಶುಭ ಕೋರಿದ್ದಾರೆ.
ರಿಷಬ್ ಶೆಟ್ಟಿ ಪೋಸ್ಟ್: ಚಂದ್ರಯಾನ 3ರ ಫೋಟೋಗಳನ್ನು ನೋಡಿದ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ತಮ್ಮ ಸಂತೋಷವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ” ನಮ್ಮ ದೇಶ ಮತ್ತೊಂದು ಮೈಲಿಗಲ್ಲಿಗೆ ಸಾಕ್ಷಿಯಾಗಲಿದೆ. ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ನನಗೆ ಖುಷಿಯಾಗುತ್ತಿದೆ, ವಿಕ್ರಮ್ ಲ್ಯಾಂಡರ್ ಸುರಕ್ಷಿತವಾಗಿ ಚಂದ್ರನ ಮೇಲೆ ಲ್ಯಾಂಡ್ ಆಗಲು ನಾವು ಪ್ರಾರ್ಥಿಸೋಣ” ಎಂದು Xನಲ್ಲಿ ಬರೆದುಕೊಂಡಿದ್ದಾರೆ.
ಶಿವಣ್ಣ, ಯೋಗರಾಜ್ ಭಟ್ ಶುಭ ಹಾರೈಕೆ: ಮಾಧ್ಯಮದವರೊಂದಿಗೆ ಮಾತನಾಡಿದ ನಟ ಶಿವರಾಜ್ಕುಮಾರ್ ಚಂದ್ರಯಾನ 3 ಸಕ್ಸಸ್ ಆಗಲಿ ಎಂದು ಇಡೀ ಇಸ್ರೋ ತಂಡಕ್ಕೆ ಶುಭ ಕೋರಿದರು. ತಂಡದ ಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ನಿರ್ದೇಶಕ ಯೋಗರಾಜ್ ಭಟ್ ಮಾತನಾಡಿ, ದೇಶದ ಸಾಧನೆ ಬಗ್ಗೆ ಹರ್ಷ ವ್ಯಕ್ತಪಡಿಸಿದರು. ತಂತ್ರಜ್ಞಾನದ ಮೂಲಕ ಇಡೀ ದೇಶದ ಬೆಳವಣಿಗೆ ಆಗುತ್ತದೆ. ಇದೀಗ ಚಂದ್ರಯಾನ 3ರ ಸಕ್ಸಸ್ನಿಂದ ನಮ್ಮ ದೇಶ ದೊಡ್ಡ ಮಟ್ಟದಲ್ಲಿ ಗುರುತಿಸಲ್ಪಡುತ್ತದೆ ಎಂದು ತಿಳಿಸಿದ್ದರು.
ತಾರಾ ಅನುರಾಧ ಹೇಳಿದ್ದಿಷ್ಟು: ಈ ಬಗ್ಗೆ ನಟಿ ತಾರಾ ಅನುರಾಧ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಮ್ಮ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಲ್ಯಾಂಡ್ ಆಗುವ ಮೂಲಕ ದಾಖಲೆ ಬರೆಯಲಿದೆ. ನಾವು ಮಕ್ಕಳಿದ್ದಾಗ ಚಂದ್ರನನ್ನು ತೋರಿಸುವ ಮೂಲಕ ನಮಗೆ ಊಟ ಮಾಡಿಸುತ್ತಿದ್ದರು. ಈಗ ನಮ್ಮ ವಿಜ್ಞಾನಿಗಳು ನಮಗೆ ಚಂದ್ರನನ್ನು ತೋರಿಸುತ್ತಿದ್ದಾರೆ. ಈ ಬಗ್ಗೆ ಕುತೂಹಲ ಹೆಚ್ಚಾಗಿದೆ. ಸಂಪೂರ್ಣ ಯಶಸ್ವಿ ಆಗಲೆಂದು ನಟಿ ತಾರಾ ಅನುರಾಧ ಹರ್ಷ ವ್ಯಕ್ತಪಡಿಸಿದ್ದಾರೆ.ಹಿರಿಯ ನಟ ಅನುಪಮ್ ಖೇರ್ ಟ್ವೀಟ್ ಮಾಡಿ ಚಂದ್ರಯಾನ 3ರ ಯಶಸ್ಸಿಗೆ ಒಳಿತು ಬಯಸಿದ್ದಾರೆ. ”ಆತ್ಮೀಯ ವಿಜ್ಞಾನಿಗಳೇ, ಸಿಬ್ಬಂದಿಯೇ, ತಂತ್ರಜ್ಞರೇ ಮತ್ತು ಇಸ್ರೋದಲ್ಲಿರುವ ಪ್ರತಿಯೊಬ್ಬರಿಗೂ!, 140 ಕೋಟಿ ಭಾರತೀಯರು, ಪ್ರಪಂಚದಾದ್ಯಂತ ಇರುವ ಲಕ್ಷಾಂತರ ಭಾರತೀಯರು ಪ್ರಾರ್ಥನೆ ಮೂಲಕ ತಮ್ಮ ಹೃದಯದಲ್ಲಿ ಚಂದ್ರನನ್ನು ನೋಡುತ್ತಿದ್ದಾರೆ, ಚಂದ್ರಯಾನ 3 ಹೆಮ್ಮೆಯಿಂದ ಲ್ಯಾಂಡ್ ಆಗುವ ಕುರಿತು ಅವರ ಕಣ್ಣಲ್ಲಿ ಭರವಸೆ ಇದೆ. ಭಾರತೀಯರಾಗಿ ಸಂಭ್ರಮಾಚರಣೆ ಮಾಡಲು ನಮಗೆ ಕಾರಣ ಕೊಟ್ಟಿದ್ದಕ್ಕಾಗಿ ಧನ್ಯವಾದಗಳು. ಸಂಜೆ 6 ಗಂಟೆ ಸುಮಾರಿಗೆ ಜೈ ಹಿಂದ್ ಎಂದು ಹೇಳುತ್ತೇನೆ” ಎಂದು ಬರೆದುಕೊಂಡಿದ್ದಾರೆ.