ತಮಿಳುನಾಡು : ಕಾವೇರಿ ನದಿ ನೀರು ವಿವಾದಕ್ಕೆ ಸಂಬಂಧಿಸಿದಂತೆ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ ಅಣ್ಣಾಮಲೈ ಪ್ರತಿಕ್ರಿಯೆ ನೀಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ನೀರಿನ ಸಮಸ್ಯೆ ಪ್ರಾರಂಭವಾಗಿದೆ. ಅವರು ಅಲ್ಪಾವಧಿಯ ರಾಜಕೀಯ ಲಾಭಕ್ಕಾಗಿ ಸಮಸ್ಯೆಗಳನ್ನು ಸೃಷ್ಟಿಸುತ್ತಿದ್ದಾರೆ. ತಮಿಳುನಾಡಿಗೆ ಒಂದು ಹನಿ ನೀರನ್ನು ಕೊಡುವುದಿಲ್ಲ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ ಬಳಿಕ ಸಮಸ್ಯೆ ಮತ್ತಷ್ಟು ಉಲ್ಬಣಗೊಂಡಿತು” ಎಂದು ವಾಗ್ದಾಳಿ ನಡೆಸಿದರು.
ನೀಟ್ ಪರೀಕ್ಷೆ ಕುರಿತು ಮಾತನಾಡಿದ ಅವರು, “ನೀಟ್ ವಿಷಯದಲ್ಲಿ ಡಿಎಂಕೆ ಪಕ್ಷ ರಾಜಕೀಯ ಮಾಡುತ್ತಿದೆ. ಇದುವರೆಗೆ 18 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೆ ಡಿಎಂಕೆ ಪಕ್ಷವೇ ಸಂಪೂರ್ಣ ಹೊಣೆ. ಆದ್ದರಿಂದ ತಮಿಳುನಾಡು ಪೊಲೀಸರು ಎಂಕೆ ಸ್ಟಾಲಿನ್ ಮತ್ತು ಉದಯನಿಧಿ ಸ್ಟಾಲಿನ್ ವಿರುದ್ಧ ವಿವಿಧ ಸೆಕ್ಷನ್‌ಗಳ ಅಡಿ ಎಫ್‌ಐಆರ್ ದಾಖಲಿಸಬೇಕೆಂದು ನಾನು ಒತ್ತಾಯಿಸುತ್ತಿದ್ದೇನೆ” ಎಂದರು.
ಚಂದ್ರಯಾನ 3 ವಿಷನ್ ಕುರಿತು, “ಭಾರತವು ಅತ್ಯಂತ ಗಣ್ಯ ರಾಷ್ಟ್ರಗಳ ಪಟ್ಟಿಗೆ ಸೇರಲು ಸಿದ್ಧವಾಗಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ದಕ್ಷಿಣ ಧ್ರುವದಲ್ಲಿ ರೋವರ್ ಮತ್ತು ಲ್ಯಾಂಡರ್ ಅನ್ನು ಯಶಸ್ವಿಯಾಗಿ ಇಳಿಸಲು ಮುಂದಾಗಿದೆ. ತಾಂತ್ರಿಕವಾಗಿ ದಕ್ಷಿಣ ಧ್ರುವವು ಚಂದ್ರನ ಕಠಿಣ ಭಾಗವಾಗಿದ್ದು, ಇಡೀ ದೇಶವೇ ಈ ಮಹತ್ತರ ಕ್ಷಣವನ್ನು ಕಣ್ತುಂಬಿಕೊಳ್ಳಲು ಎದುರು ನೋಡುತ್ತಿದೆ. ವಿಶೇಷವಾಗಿ, ರಷ್ಯಾ ದೇಶವು ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದ್ದು, ಕಳೆದ ಎರಡು ದಿನಗಳ ಹಿಂದೆ ತಮ್ಮ ರೇಂಜರ್ ಲ್ಯಾಂಡರ್ ಅನ್ನು ಇಳಿಸುವಲ್ಲಿ ವಿಫಲವಾಗಿದೆ. ಇದೀಗ, ದೇಶವು ಮಹತ್ವದ ಕಾರ್ಯಕ್ಕೆ ಮುಂದಾಗಿದ್ದು, ಭಾರತ ವಿಜ್ಞಾನವು ವಿಶ್ವಕ್ಕೆ ಸಮನಾಗಿದೆ ಎಂದು ಸಾಬೀತುಪಡಿಸಲು ನಾವು ಎದುರು ನೋಡುತ್ತಿದ್ದೇವೆ” ಎಂದು ಹೇಳಿದರು. (ಎಎನ್ಐ)
ಕಾವೇರಿ ನೀರು ಬಿಡುಗಡೆ ವಿರೋಧಿಸಿ ಪ್ರತಿಭಟನೆ : ನಿನ್ನೆ ಕೆಆರ್ಎಸ್ ಅಣೆಕಟ್ಟೆಯಿಂದ ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುಗಡೆ ಮಾಡುತ್ತಿರುವುದನ್ನು ವಿರೋಧಿಸಿ ರೈತ ಸಂಘಟನೆಗಳು ಬೆಂಗಳೂರು – ಮೈಸೂರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದವು. 124.80 ಅಡಿ ಗರಿಷ್ಟ ಸಾಮರ್ಥ್ಯದ ಕೆಆರ್ಎಸ್ ಜಲಾಶಯದಲ್ಲಿ ಇದೀಗ 104 ಅಡಿ ಮಾತ್ರ ನೀರು ಸಂಗ್ರಹವಿದೆ. ಆದರೆ, ಕಳೆದ ಕೆಲ ದಿನಗಳಿಂದ 10 ರಿಂದ 12 ಸಾವಿರ ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಹರಿಸಲಾಗುತ್ತಿದೆ. ಹೀಗಾಗಿ, ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ರೈತರು ಸಂಕಷ್ಟ ಎದುರಿಸಬೇಕಾಗುತ್ತದೆ ಎಂದು ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿ ರೈತರು ಪ್ರತಿಭಟನೆ ನಡೆಸಿದರು.