Home / ರಾಜಕೀಯ / ಲೋಕಸಭೆ ಚುನಾವಣೆ: ಮಕ್ಕಳು, ಪತ್ನಿ, ಸಹೋದರರ ಕಣಕ್ಕಿಳಿಸಲು ‘ಕೈ’ ಕಲಿಗಳ ಕಸರತ್ತು

ಲೋಕಸಭೆ ಚುನಾವಣೆ: ಮಕ್ಕಳು, ಪತ್ನಿ, ಸಹೋದರರ ಕಣಕ್ಕಿಳಿಸಲು ‘ಕೈ’ ಕಲಿಗಳ ಕಸರತ್ತು

Spread the love

ಬೆಂಗಳೂರು: 2024ರ ಲೋಕಸಭೆ ಚುನಾವಣೆಯಲ್ಲಿ 20ಕ್ಕೂ ಹೆಚ್ಚಿನ ಸಂಖ್ಯೆಯ ಅಭ್ಯರ್ಥಿಗಳನ್ನು ಗೆಲ್ಲಿಸುವ ಒತ್ತಡಕ್ಕೆ ಸಿಲುಕಿರುವ ರಾಜ್ಯ ಕಾಂಗ್ರೆಸ್ ಪಕ್ಷದ ಮುಖಂಡರು ತಮ್ಮ ಕುಟುಂಬಸ್ಥರನ್ನೇ ಕಣಕ್ಕಿಳಿಸಲು ಕಸರತ್ತು ನಡೆಸಿದ್ದಾರೆ.

ರಾಜ್ಯದಲ್ಲಿ ಪಕ್ಷ ಅಧಿಕಾರದಲ್ಲಿರುವುದರಿಂದ ಅತ್ಯಧಿಕ ಸಂಸದರನ್ನು ಗೆಲ್ಲಿಸಿಕೊಡುವ ಟಾರ್ಗೆಟ್ ಅನ್ನು ಪಕ್ಷದ ಹೈಕಮಾಂಡ್ ಕೆಪಿಸಿಸಿಗೆ ನೀಡಿದೆ. ಬಿಜೆಪಿ ವಿರುದ್ಧ ಹೆಚ್ಚಿನ ಕ್ಷೇತ್ರಗಳನ್ನು ಜಯಿಸುವ ಸಲುವಾಗಿ ಕೆಲವು ಕಡೆ ಸಚಿವರನ್ನೇ ಕಣಕ್ಕಿಳಿಸಲು ಹೈಕಮಾಂಡ್ ಯೋಚಿಸುತ್ತಿದೆ. ಇದರ ಸುಳಿವು ಅರಿತ ಸಚಿವರು ಚುನಾವಣೆಗೆ ತಾವು ಕಣಕ್ಕಿಳಿಯುವ ಬದಲು ತಮ್ಮ ಕುಟುಂಬಸ್ಥರನ್ನು ನಿಲ್ಲಿಸುವ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.

ಕಂದಾಯ ಸಚಿವ ಕೃಷ್ಣ ಬೈರೇಗೌಡ ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ತಮ್ಮ ಪತ್ನಿ ಮೀನಾಕ್ಷಿ ಅವರನ್ನು, ತೋಟಗಾರಿಕೆ ಸಚಿವ ಎಸ್.ಎಸ್ ಮಲ್ಲಿಕಾರ್ಜುನ ಅವರು ದಾವಣಗೆರೆ ಕ್ಷೇತ್ರದಲ್ಲಿ ತಮ್ಮ ಪತ್ನಿ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರನ್ನು, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ತಮ್ಮ ಪತ್ನಿ ಟಬು ರಾವ್ ಅವರನ್ನು ಚುನಾವಣೆಗೆ ನಿಲ್ಲಿಸಲು ಆಸಕ್ತಿ ವಹಿಸಿದ್ದಾರೆಂದು ಹೇಳಲಾಗಿದೆ. ​ಶಾಸಕ ವಿಜಯಾನಂದ್ ಕಾಶಪ್ಪನವರ್ ಅವರು ಬಾಗಲಕೋಟೆ ಲೋಕಸಭಾ ಕ್ಷೇತ್ರದಲ್ಲಿ ತಮ್ಮ ಪತ್ನಿ ವೀಣಾ ಕಾಶಪ್ಪನವರ್ ಅವರನ್ನು ಚುನಾವಣೆಗೆ ನಿಲ್ಲಿಸಲು ಒಲವು ಹೊಂದಿದ್ದು, ಪಕ್ಷದ ಟಿಕೆಟ್ ಪಡೆಯಲು ಯತ್ನ ನಡೆಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೈಸೂರು – ಕೊಡಗು ಕ್ಷೇತ್ರದಲ್ಲಿ ತಮ್ಮ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ, ಸಮಾಜ ಕಲ್ಯಾಣ ಸಚಿವ ಹೆಚ್​ಸಿ ಮಹದೇವಪ್ಪ ಚಾಮರಾಜನಗರ ಕ್ಷೇತ್ರದಲ್ಲಿ ತಮ್ಮ ಪುತ್ರ ಸುನೀಲ್ ಬೋಸ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ತಮ್ಮ ಪುತ್ರಿ ಸೌಮ್ಯ ರೆಡ್ಡಿ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಬೆಳಗಾವಿ ಕ್ಷೇತ್ರದಲ್ಲಿ ತಮ್ಮ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಅವರನ್ನು ಚುನಾವಣೆಗೆ ನಿಲ್ಲಿಸಲು ಮುಂದಾಗಿದ್ದಾರೆ. ಅದೇ ರೀತಿಯಾಗಿ ಹಿರಿಯ ಶಾಸಕ ಎನ್​ಎ ಹ್ಯಾರೀಸ್ ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ತಮ್ಮ ಪುತ್ರ ಮಹ್ಮದ್ ನಲಪಾಡ್ ಅವರಿಗೆ ಟಿಕೆಟ್ ಪಡೆಯುವುದಕ್ಕಾಗಿ ಪ್ರಯತ್ನ ಮಾಡುತ್ತಿದ್ದರೆಂದು ತಿಳಿದುಬಂದಿದೆ.

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮ್ಮ ಸಹೋದರ ಡಿ.ಕೆ ಸುರೇಶ್ ಅವರನ್ನು ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ, ಮಾಜಿ ಸಚಿವರಾದ ಎಂ.ಆರ್ ಸೀತಾರಾಮ್ ಅವರು ತಮ್ಮ ಪುತ್ರ ರಕ್ಷಾ ರಾಮಯ್ಯ ಅವರನ್ನು ಚಿಕ್ಕಬಳ್ಳಾಪುರ ಕ್ಷೇತ್ರದಿಂದ, ಮಾಜಿ ಸಚಿವ, ಹಿರಿಯ ನಾಯಕ ಆರ್​ವಿ ದೇಶಪಾಂಡೆ ಅವರು ತಮ್ಮ ಪುತ್ರ ಪ್ರಶಾಂತ ದೇಶಪಾಂಡೆ ಅವರನ್ನು ಉತ್ತರ ಕನ್ನಡ ಕ್ಷೇತ್ರದಿಂದ ಚುನಾವಣೆಗೆ ನಿಲ್ಲಿಸಲು ಉತ್ಸುಕರಾಗಿದ್ದಾರೆಂದು ಹೇಳಲಾಗಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ತಮ್ಮ ಸಹೋದರಿಯಾದ ಹಾಗೂ ನಟ ಶಿವರಾಜ ಕುಮಾರ್ ಅವರ ಪತ್ನಿ ಗೀತಾ ಶಿವರಾಜ ಕುಮಾರ್ ಅವರಿಗೆ ಶಿವಮೊಗ್ಗ ಕ್ಷೇತ್ರದ ಟಿಕೆಟ್​ಗಾಗಿ ಬೇಡಿಕೆ ಇಟ್ಟಿದ್ದಾರೆನ್ನಲಾಗಿದೆ.


Spread the love

About Laxminews 24x7

Check Also

ಅಧಿಕಾರಿಗಳ ಭರವಸೆ: ಧರಣಿ ಅಂತ್ಯ.

Spread the love ರಾಮದುರ್ಗ: ಗ್ರಾಮ ಪಂಚಾಯ್ತಿಗಳಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳ ಹಣವನ್ನು ಸಂಬಂಧಿಸಿದ ಅಧಿಕಾರಿಗಳಿಂದ ಸರ್ಕಾರಕ್ಕೆ ಭರಿಸುವ ಭರವಸೆಯನ್ನು ತಾಲ್ಲೂಕು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ