ಬೆಳಗಾವಿ: ಲೋಡ್ ಶೆಡ್ಡಿಂಗ್ ಪರಿಣಾಮವಾಗಿ ರೈತರ ಬೆಳೆಗಳು ನೀರಿಲ್ಲದೆ ಒಣಗುವ ಪರಿಸ್ಥಿತಿಗೆ ತಲುಪಿದ್ದು, ಪಂಪ್ಸೆಟ್ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆಗೆ ತಕ್ಷಣ ಕ್ರಮ ಕೈಗೊಳ್ಳಬೇಕು.
ಇಲ್ಲದಿದ್ದರೆ ರೈತರೊಂದಿಗೆ ಸೇರಿ ಬಿಜೆಪಿ ರೈತ ಮೋರ್ಚಾ ವತಿಯಿಂದ ಉಗ್ರ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಐಪಿ ಸೆಟ್ಗಳಿಗೆ ಸರಿಯಾಗಿ ವಿದ್ಯುತ್ ಪೂರೈಕೆ ಮಾಡದಿದ್ದರೆ ಈಗ ಬಿತ್ತಿರುವ ಶೇ.80ರಷ್ಟು ಬೆಳೆಗಳು ಒಣಗಿ, ಜಿಲ್ಲೆಯಲ್ಲಿ ಆಹಾರ ಉತ್ಪನ್ನಗಳ ಮೇಲೆ ದೊಡ್ಡ ಹೊಡೆತ ಬೀಳುತ್ತದೆ. ರೈತರು ಆರ್ಥಿಕವಾಗಿಯೂ ಜರ್ಜರಿತರಾಗುತ್ತಾರೆ. ಹಾಗಾಗಿ ವಿದ್ಯುತ್ ಖರೀದಿಸಲು ತಕ್ಷಣ ಸರ್ಕಾರ ಕ್ರಮ ಕೈಗೊಳ್ಳಬೇಕು.
ಈಗಾಗಲೇ ಸರ್ಕಾರ ಲೋಡ್ ಶೆಡ್ಡಿಂಗ್ ಕುರಿತು ಅಧಿಕಾರಿಗಳಿಗೆ ಮೌಖಿಕವಾಗಿ ತಿಳಿಸಿದೆ. ಒಂದು ಕಡೆ ಅನೇಕ ಘೋಷಣೆಗಳನ್ನು ಕೊಟ್ಟು ಮತ್ತೊಂದು ಕಡೆ ರೈತರನ್ನು ಕೈಬಿಡುವ ಕೆಲಸ ಆಗಬಾರದು. ಈ ಬಗ್ಗೆ ಗಮನಹರಿಸದಿದ್ದರೆ ಆಗಸ್ಟ್ ತಿಂಗಳ ಕೊನೆಯವರೆಗೆ ನೋಡಿಕೊಂಡು ಸೆಪ್ಟೆಂಬರ್ ಮೊದಲ ವಾರದಲ್ಲಿ ರಾಜ್ಯದ ಎಲ್ಲಾ ವಿದ್ಯುತ್ ಕೇಂದ್ರಗಳ ಮುಂದೆ ಬಿಜೆಪಿ ರೈತ ಮೋರ್ಚಾ ವತಿಯಿಂದ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
Laxmi News 24×7