ಬೆಂಗಳೂರು : ಜೈಲಿಂದ ಬಿಡುಗಡೆಯಾಗುತ್ತಿದ್ದಂತೆ ಸಿದ್ದಾಪುರ ಮಹೇಶನನ್ನು ಭೀಕರವಾಗಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ, ಹತ್ಯೆಯ ಹಿಂದಿದ್ದರು ಎನ್ನಲಾಗುತ್ತಿರುವ ಇಬ್ಬರು ಕುಖ್ಯಾತ ರೌಡಿಶೀಟರ್‌ಗಳು ನ್ಯಾಯಾಲಯಕ್ಕೆ ಶರಣಾಗಿದ್ದಾರೆ.
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಬಿಡುಗಡೆಯಾಗಿ ಹೊರಬಂದ ಕೆಲವೇ ಹೊತ್ತಿನಲ್ಲಿ ರೌಡಿಶೀಟರ್ ಮಹೇಶನನ್ನು ಕ್ಷಣಮಾತ್ರದಲ್ಲಿ ಅಟ್ಟಾಡಿಸಿ ಕೊಲೆ ಮಾಡಲಾಗಿತ್ತು. ಭೀಕರ ಕೊಲೆ ಬೆಂಗಳೂರು ಭೂಗತ ಜಗತ್ತಿನ ರಿವೆಂಜ್ ರೌಡಿಸಂ ಅನ್ನು ಅನಾವರಣಗೊಳಿಸಿತ್ತು. ಈಗ ಕೊಲೆಯ ಮಾಸ್ಟರ್ ಮೈಂಡ್ಗಳು ಎನ್ನಲಾದ ವಿಲ್ಸನ್ ಗಾರ್ಡನ್ ನಾಗ ಹಾಗೂ ಡಬಲ್ ಮೀಟರ್ ಮೋಹನ್ ನ್ಯಾಯಾಲಯಕ್ಕೆ ಶರಣಾಗಿದ್ದಾರೆ.
ವ್ಯವಸ್ಥಿತವಾಗಿ ಸಂಚು ರೂಪಿಸಿ ಸಿದ್ದಾಪುರ ಮಹೇಶನನ್ನು ಆಗಸ್ಟ್ 4ರಂದು ಕೊಲೆ ಮಾಡಲಾಗಿತ್ತು. ಈ ಕೊಲೆ ರಾಜಧಾನಿಯನ್ನು ಬೆಚ್ಚಿಬೀಳಿಸಿತ್ತು. ಪ್ರಕರಣದಲ್ಲಿ ಪೊಲೀಸರು 13ಕ್ಕಿಂತ ಹೆಚ್ಚು ಮಂದಿ ಆರೋಪಿಗಳನ್ನು ಬಂಧಿಸಿದ್ದರೂ ಪ್ರಮುಖ ಆರೋಪಿಗಳಾದ ನಾಗ ಹಾಗೂ ಮೋಹನ ಸಿಕ್ಕಿರಲಿಲ್ಲ.
ಒಂದೆಡೆ ಪರಪ್ಪನ ಅಗ್ರಹಾರ ಪೊಲೀಸರು, ಇನ್ನೊಂದೆಡೆ ಸಿಸಿಬಿ ಇಬ್ಬರಿಗಾಗಿ ಹುಡುಕಾಟ ನಡೆಸುತ್ತಿತ್ತು. ಈ ಮಧ್ಯೆ ಇಬ್ಬರು ರೌಡಿಶೀಟರ್‌ಗಳು ನಗರದ 9ನೇ ಎಸಿಎಂಎಂ ನ್ಯಾಯಾಲಯಕ್ಕೆ ಶರಣಾಗಿ ಪೊಲೀಸರು ಹಾಗೂ ಸಿಸಿಬಿಯನ್ನು ಅಣಕಿಸುವಂತೆ ಮಾಡಿದ್ದಾರೆ. ಸದ್ಯ ನಾಗ ಹಾಗೂ ಮೋಹನ ಇಬ್ಬರನ್ನೂ ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ನೀಡಿದೆ. ಇತ್ತ ಶರಣಾದ ಸಂಗತಿ ಗೊತ್ತಾಗುತ್ತಿದ್ದಂತೆ ಪೊಲೀಸರು ಆರೋಪಿಗಳನ್ನು ಕಸ್ಟಡಿಗೆ ಕೇಳಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.