ಕೊಲ್ಲಾಪುರ (ಮಹಾರಾಷ್ಟ್ರ): ಕೊಲ್ಲಾಪುರ ಸೇರಿದಂತೆ ಸಾಂಗ್ಲಿ, ಸತಾರಾ ಜಿಲ್ಲೆಯಲ್ಲಿ ಇಂದು (ಬುಧವಾರ) ಮುಂಜಾನೆ ಭೂಮಿ ಕಂಪಿಸಿದ ಅನುಭವವಾಗಿದೆ. ಭೂಕಂಪದ ಕೇಂದ್ರಬಿಂದು ಸತಾರಾ ಜಿಲ್ಲೆಯ ಕೊಯ್ನಾ ಅಣೆಕಟ್ಟಿನಿಂದ ಕೇವಲ ಇಪ್ಪತ್ತು ಕಿಲೋ ಮೀಟರ್ ದೂರದಲ್ಲಿದೆ. ನಾಗರಿಕರು ಭಯಭೀತರಾಗಿದ್ದಾರೆ. ಭೂಕಂಪ ತೀವ್ರತೆಯು ರಿಕ್ಟರ್ ಮಾಪಕದಲ್ಲಿ 3.4 ದಾಖಲಾಗಿದೆ.
ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರದ ಪ್ರಕಾರ, ಭೂಕಂಪದ ಕೇಂದ್ರ ಬಿಂದು ನೆಲದಿಂದ 5 ಕಿಮೀ ಆಳದಲ್ಲಿ ಇದೆ. ಕೊಲ್ಹಾಪುರದಿಂದ 76 ಕಿಮೀ ದೂರದಲ್ಲಿರುವ ಚಂದೋಲಿ ಅಭಯಾರಣ್ಯ ಪ್ರದೇಶದಲ್ಲಿ ಭೂಕಂಪದ ಅನುಭವವಾಗಿದೆ.
ನಾಗರಿಕರಲ್ಲಿ ಭಯದ ವಾತಾವರಣ: ಸತಾರಾ ಜಿಲ್ಲೆಯ ಕೊಯ್ನಾ ಅಣೆಕಟ್ಟು ಮತ್ತು ಅಭಯಾರಣ್ಯ ಪ್ರದೇಶದಲ್ಲಿ ಈ ಭೂಕಂಪನದ ಅನುಭವವಾಗಿದೆ. ಇಂದು ಬೆಳಗ್ಗೆ 7 ಗಂಟೆ ಸುಮಾರಿಗೆ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಜಿಲ್ಲೆಯ ಪಟಾನ್ ನಗರದಲ್ಲಿ ಹಾಗೂ ಸಮೀಪದ ಗ್ರಾಮಗಳಲ್ಲಿ ಬೆಳಗ್ಗೆ 6.40ಕ್ಕೆ ಭೂಮಿ ನಡುಗಿದೆ. ಬೆಳಗಿನ ವಾಕಿಂಗ್‌ಗೆ ತೆರಳಿದ್ದ ನಾಗರಿಕರಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು.
ಕೊಯ್ನಾ ಡ್ಯಾಂ ಸಮೀಪದಲ್ಲಿ ಲಘು ಭೂಕಂಪನ: ಕೊಯ್ನಾ ಅಣೆಕಟ್ಟಿನಿಂದ 20 ಕಿಮೀ ದೂರದಲ್ಲಿ ಭೂಕಂಪನದ ಅನುಭವವಾಗಿದ್ದು, ಅಣೆಕಟ್ಟು ಸುರಕ್ಷಿತವಾಗಿದೆ. ಭೂಕಂಪದಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಕೊಲ್ಹಾಪುರ ಸತಾರಾ ಸೇರಿದಂತೆ ಸಾಂಗ್ಲಿ ಜಿಲ್ಲೆಯ ಶಿರಾಲಾ ತಾಲೂಕಿನ ಚಂದೋಲಿ ಅಭಯಾರಣ್ಯ ಪ್ರದೇಶದಿಂದ 15 ಕಿಮೀ ವ್ಯಾಪ್ತಿಯಲ್ಲಿ ಲಘು ಭೂಕಂಪನದ ಅನುಭವವಾಗಿದೆ. ಬೆಳಗ್ಗೆ ರಿಕ್ಟರ್ ಮಾಪಕದಲ್ಲಿ 3.2ರಷ್ಟು ಭೂಕಂಪದ ತೀವ್ರತೆ ದಾಖಲಾಗಿದೆ. ಬೆಳಗ್ಗೆ 6.55ಕ್ಕೆ ಭೂಮಿ ಕಂಪಿಸಿದ ಅನುಭವವಾಯಿತು.