ಬೆಂಗಳೂರು : ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ಪದ ಬಳಕೆ ಮಾಡಿರುವ ಆರೋಪದಡಿ ನಟ, ನಿರ್ದೇಶಕ ಉಪೇಂದ್ರ ವಿರುದ್ಧ ಪ್ರಥಮ ವರ್ತಮಾನ ವರದಿ (ಎಫ್‌ಐಆರ್) ದಾಖಲಾಗಿದೆ.
ಜಾತಿಯೊಂದರ ಭಾವನೆಗಳಿಗೆ ಧಕ್ಕೆಯಾಗುವ ಪದ ಬಳಸಿದ್ದಾರೆ ಎಂದು ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಮಧುಸೂದನ್ ಅವರು ದೂರು ನೀಡಿದ್ದರು.
ಇತ್ತೀಚಿಗೆ ತಮ್ಮ ಸಾಮಾಜಿಕ ಜಾಲತಾಣ ಖಾತೆಯ ನೇರಪ್ರಸಾರದಲ್ಲಿ ಮಾತನಾಡಿದ್ದ ಉಪೇಂದ್ರ ಸಮುದಾಯವೊಂದರ ಕುರಿತು ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದರು ಎಂದು ಆರೋಪಿಸಲಾಗಿದೆ. ಈ ಸಂಬಂಧ ಉಪೇಂದ್ರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ತಕ್ಷಣ ಎಚ್ಚೆತ್ತ ಉಪೇಂದ್ರ ಅವರು ವಿಡಿಯೋ ಡಿಲೀಟ್ ಮಾಡಿ, ಸಾಮಾಜಿಕ ಜಾಲತಾಣ ಬಳಕೆದಾರರಲ್ಲಿ ಕ್ಷಮೆ ಯಾಚಿಸಿದ್ದರು.
ರಾಜ್ಯಾದ್ಯಂತ ಅಭಿಮಾನಿಗಳನ್ನು ಹೊಂದಿರುವ ನಟನನ್ನು ಅನುಕರಿಸುವ ಸಾಧ್ಯತೆಗಳಿದ್ದು, ಸಾರ್ವಜನಿಕ ಸ್ವಾಸ್ಥ್ಯ ಹಾಳಾಗುತ್ತದೆ. ಆದ್ದರಿಂದ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಒತ್ತಾಯಿಸಲಾಗಿತ್ತು.
ಎಫ್‌ಐಆರ್ ಅಂಶಗಳು : ಉಪೇಂದ್ರ ಸಾಮಾಜಿಕ ಜಾಲತಾಣದ ಕಾರ್ಯಕ್ರಮದ ನೇರಪ್ರಸಾರದಲ್ಲಿ ಮಾತನಾಡುವಾಗ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದಾರೆ. ಇದರಿಂದ ಒಂದು ಸಮಾಜದ ಭಾವನೆಗಳಿಗೆ ಘಾಸಿ ಉಂಟಾಗಿದೆ. ನಟನಾಗಿ ರಾಜ್ಯಾದ್ಯಂತ ಹೆಸರು ಮಾಡಿರುವ ಉಪೇಂದ್ರ ಅವರು ಎಲ್ಲರಿಗೂ ಮಾದರಿಯಾಗಿ ನಡೆದುಕೊಳ್ಳಬೇಕಿತ್ತು. ಇವರನ್ನು ಅನುಕರಣೆ ಮಾಡುವವರು ಕೂಡಾ ಮುಂದುವರೆಸಿದರೆ ಸಾಮಾಜಿಕ ಸ್ವಾಸ್ಥ್ಯ ಹಾಳಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ನಟನ ವಿರುದ್ಧ ಒಂದು ಸಮುದಾಯದ ಭಾವನೆಗೆ ಧಕ್ಕೆ ಉಂಟು ಮಾಡಿರುವ ಹಿನ್ನೆಲೆಯಲ್ಲಿ ಪ. ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ನಿಯಂತ್ರಣ ಕಾಯ್ದೆ -1989) ಕ್ರಮ ಕೈಗೊಳ್ಳುವಂತೆ ಕೋರಲಾಗಿದೆ.
ಹೇಳಿಕೆಗೆ ಕ್ಷಮೆ ಯಾಚಿಸಿದ ಉಪೇಂದ್ರ: ಇಂದು ಫೇಸ್‌ಬುಕ್ ಮತ್ತು ಇನ್ಸ್‌ಟಾಗ್ರಾಮ್ ನೇರ ಪ್ರಸಾರದಲ್ಲಿ ಮಾತನಾಡಿದ ಉಪೇಂದ್ರ, ಬಾಯ್ತಪ್ಪಿ ಒಂದು ಗಾದೆ ಮಾತು ಬಳಸಿದ್ದೆ. ಅದರಿಂದ ಹಲವರ ಭಾವನೆಗಳಿಗೆ ಧಕ್ಕೆ ಉಂಟಾಗಿರುವುದು ಕಂಡುಬಂದಿದೆ. ತಕ್ಷಣವೇ ಆ ಲೈವ್ ವಿಡಿಯೋವನ್ನು ನನ್ನ ಸಾಮಾಜಿಕ ಜಾಲತಾಣಗಳಿಂದ ಡಿಲೀಟ್ ಮಾಡಿದ್ದೇನೆ. ನನ್ನ ಮಾತಿಗೆ ಕ್ಷಮೆ ಇರಲಿ ಎಂದು ಹೇಳಿದ್ದಾರೆ.