ಬಾಗಲಕೋಟೆ: ಇಸ್ರೋದ ಮಾಜಿ ಅಧ್ಯಕ್ಷ ಪದ್ಮಶ್ರೀ ಪುರಸ್ಕೃತ ಪ್ರೊ. ಎ ಎಸ್ ಕಿರಣ್ ಕುಮಾರ್ ಅವರಿಗೆ ಶನಿವಾರ ಡಾ. ಆರ್ ಎಲ್ ಕಪೂರ್ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿ ಅಭಿನಂದಿಸಲಾಯಿತು. ಬಾಗಲಕೋಟೆ ನಗರದ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಎಸ್ ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಹಾನಗಲ್ ಶ್ರೀ ಕುಮಾರೇಶ್ವರ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ ಆಯೋಜಿಸಲಾಗಿದ್ದ ಭಾರತೀಯ ಮನೋವೈದ್ಯರ ಸಂಘದ ರಾಜ್ಯ ಶಾಖೆ 33ನೇ ವಾರ್ಷಿಕ ಸಮ್ಮೇಳನದಲ್ಲಿ, ಡಾ. ಆರ್ ಎಲ್ ಕಪೂರ್ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಬಸವೇಶ್ವರ ವಿದ್ಯಾವರ್ಧಕ ಸಂಘದ ವೈದ್ಯಕೀಯ ಮಹಾವಿದ್ಯಾಲಯದ ಶತಾಬ್ಧಿ ಭವನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ಬಾಗಲಕೋಟೆಯ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯಾಧ್ಯಕ್ಷರು ಆಗಿರುವ ಮಾಜಿ ಶಾಸಕ ವೀರಣ್ಣ ಚರಂತಿಮಠ ಹಾಗೂ ಮುಖ್ಯ ಅತಿಥಿಗಳಾಗಿ ಭಾಗಿಯಾಗಿದ್ದ ಬೆಂಗಳೂರಿನ ನಿಮಾನ್ಸ್ನ ನಿರ್ದೇಶಕಿ ಡಾ. ಪ್ರತಿಮಾ ಮೂರ್ತಿ ಅವರು ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಪ್ರಶಸ್ತಿ ಸ್ವೀಕರಿಸಿದ ನಂತರ ಇಸ್ರೋ ಮಾಜಿ ಅಧ್ಯಕ್ಷ ಪ್ರೊ. ಎ ಎಸ್ ಕಿರಣ್ ಕುಮಾರ್ ಮಾತನಾಡಿ, ಇಂದು ಭಾರತ ಖಗೋಳಶಾಸ್ತ್ರದಲ್ಲಿ ಅನೇಕ ಸಾಧನೆಗಳನ್ನು ಮಾಡಿದೆ. ಇಸ್ರೋದ ಚಂದ್ರಯಾನ 3 ಉಡಾವಣೆಯಿಂದ ರಷ್ಯಾ, ಅಮೆರಿಕ ಸೇರಿದಂತೆ ಇಡೀ ವಿಶ್ವ ಭಾರತದತ್ತ ನೋಡುತ್ತಿದೆ. ಮನುಷ್ಯನಿಗೆ ಜ್ಞಾನ ಬಹಳ ಅವಶ್ಯಕವಾದದ್ದು, ಮನುಷ್ಯ ಸಾಧಿಸಬೇಕು ಎಂದು ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು. ಹಾಗಾಗಿ ಸಾಧನೆಗೆ ಪರಿಶ್ರಮ ಅಗತ್ಯ. ಇಂತಹ ಸಮ್ಮೇಳನಗಳನ್ನ ಆಯೋಜಿಸುವುದರ ಮೂಲಕ ಒಬ್ಬರ ವಿಚಾರಗಳನ್ನ ಮತ್ತೊಬ್ಬರು ಹಂಚಿಕೊಳ್ಳಬಹುದು ಎಂದು ಅಭಿಪ್ರಾಯಪಟ್ಟರು.