Breaking News

3 ಮಂದಿ ವಿರುದ್ಧ ದೂರು ದಾಖಲು: ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರ

Spread the love

ಬೆಳಗಾವಿ: ಆ ಕುಟುಂಬ ಬದುಕು ಕಟ್ಟಿಕೊಳ್ಳಲು ತಮ್ಮ ಹುಟ್ಟೂರು ಬಿಟ್ಟು ಬೆಳಗಾವಿಗೆ ವಲಸೆ ಬಂದಿತ್ತು. ಪ್ರಾಮಾಣಿಕವಾಗಿ ಕಷ್ಟ ಪಟ್ಟು ದುಡಿಯುತ್ತಿದ್ದವರಿಗೆ ಆ ದೇವರು ಮಾತ್ರ ಕೈ ಹಿಡಿಯಲಿಲ್ಲ. ಹೌದು, ವಿಧಿಯಾಟಕ್ಕೆ ಮೂರು ಅಮಾಯಕ ಜೀವಗಳು ಬಲಿಯಾಗಿವೆ. ಇಡೀ ಕುಟುಂಬವೇ ಕಣ್ಣೀರಿನಲ್ಲಿ ಕೈ ತೊಳೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಬೆಳಗಾವಿಯ ಶಾಹು ನಗರದ 7ನೇ ಕ್ರಾಸ್ ನ‌ ನಿರ್ಮಾಣ ಹಂತದ ಕಟ್ಟಡದಲ್ಲಿ ಶನಿವಾರ ಬೆಳಗ್ಗೆ ವಿದ್ಯುತ್ ಅವಘಡದಿಂದ ರಾಮದುರ್ಗ ತಾಲೂಕಿನ‌ ಅರಬೆಂಚಿ ತಾಂಡಾದ ಈರಪ್ಪ ಗಂಗಪ್ಪ ರಾಥೋಡ(55), ಅವರ ಪತ್ನಿ ಶಾಂತವ್ವ ಈರಪ್ಪ ರಾಥೋಡ (50) ಮತ್ತು ಮೊಮ್ಮಗಳು ಅನ್ನಪೂರ್ಣ ಹೊನ್ನಪ್ಪ ರಾಥೋಡ (8) ಮೃತಪಟ್ಟಿದ್ದಾರೆ. ಒಬ್ಬರನ್ನೊಬ್ಬರು ಬದುಕಿಸಲು ಹೋಗಿ ತಮ್ಮ ಜೀವವನ್ನೇ ಕಳೆದುಕೊಂಡಿದ್ದಾರೆ.

ಅದೃಷ್ಟವಶಾತ್ ಬದುಕಿದ ಮತ್ತೋರ್ವ ಬಾಲಕಿ: ಶೆಡ್​ನ ಮನೆಯಲ್ಲಿ ಮೃತ ಮೂವರ ಜೊತೆಗೆ ಮತ್ತೊಂದು ಬಾಲಕಿ ಕೂಡ ಇದ್ದಳು. ಮೃತ ಈರಪ್ಪ ಅವರ ಮೊಮ್ಮಗಳು ಪ್ರಿಯಾ(10) ಮನೆಯಲ್ಲಿ ಮಲಗಿದ್ದರಿಂದ ಅವಳು ಬದುಕಿದ್ದಾಳೆ. ಆಕೆಗೆ ಎಚ್ಚರವಾಗಿ ಹೊರಗೆ ಬಂದು ನೋಡಿದ ವೇಳೆ, ಮೂವರು ಸಾವನ್ನಪ್ಪಿರುವ ಸುದ್ದಿ ತಿಳಿದಿದೆ. ತಕ್ಷಣವೇ ತನ್ನ ತಾಯಿಗೆ ಪ್ರಿಯಾ ಫೋನ್ ಮಾಡಿದ ನಂತರ, ಈ ದುರಂತ ನಡೆದಿರುವುದು ಕುಟುಂಬಸ್ಥರಿಗೆ ಗೊತ್ತಾಗಿದೆ.

ಈಟಿವಿ ಭಾರತ ಜೊತೆ ಮಾತನಾಡಿದ ಮೃತ ಬಾಲಕಿಯ ತಾಯಿ ಅನುಷಾ, ”ನನ್ನ ಮಗಳು ಅತ್ತೆ, ಮಾವನ ಕಡೆ ಶಾಲೆ ಕಲಿಯಲು ಇದ್ದಳು. ಸಂಗಮೇಶ್ವರ ನಗರದ ಸರ್ಕಾರಿ ಶಾಲೆಯಲ್ಲಿ ಎರಡನೇ ತರಗತಿ ಓದುತ್ತಿದ್ದಳು. ಹೊಟ್ಟೆ ಪಾಡಿಗೆ ಊರು ಬಿಟ್ಟು ದುಡಿಯಲು ಬಂದಿದ್ದಕ್ಕೆ ಈ ರೀತಿ ಆಗಿದೆ. ದಯವಿಟ್ಟು ನಮಗೆ ಅನ್ಯಾಯ ಮಾಡಬೇಡಿ. ನನ್ನ ಗಂಡ ಅಂಗವಿಕಲ ಇದ್ದಾರೆ. ನಾವು ಸಾಯಬೇಕೋ, ಬದುಕುಬೇಕೋ ಅನ್ನೋದು ಗೊತ್ತಾಗುತ್ತಿಲ್ಲ. ಸರ್ಕಾರ ನಮಗೆ ಏನಾದರೂ ಸಹಾಯ ಮಾಡಬೇಕು” ಎಂದು ಕಣ್ಣೀರು ಹಾಕಿದ್ರು.

ಮೃತ ಈರಪ್ಪ ರಾಥೋಡ ಪುತ್ರಿ ಅನ್ನುಬಾಯಿ ಮಾತನಾಡಿ, ”ವಿದ್ಯುತ್ ಅವಘಡದಿಂದ ನನ್ನ ತಂದೆ-ತಾಯಿ ಮತ್ತು ಸಹೋದರನ‌ ಮಗಳು ಮೃತಪಟ್ಟಿದ್ದಾರೆ. ನಮ್ಮ ಕುಟುಂಬಕ್ಕೆ ತುಂಬಾ ಅನ್ಯಾಯವಾಗಿದೆ. ನಮ್ಮ ಕುಟುಂಬಕ್ಕೆ ಸರ್ಕಾರ ಏನಾದರೂ ಸಹಾಯ ಮಾಡಬೇಕು. ದುಡಿಯೋಕೆ ಬಂದಿರುವ ನಮ್ಮ ತಂದೆ, ತಾಯಿ ಹೀಗೆ ಜೀವ ಕಳೆದುಕೊಳ್ಳಬೇಕಾಯಿತು” ಎಂದು ನೋವು ತೋಡಿಕೊಂಡರು.

ಮೃತರ ಸಂಬಂಧಿ ಸುಮಿತ್ರಾ ರಾಥೋಡ‌ ಮಾತನಾಡಿ, ”ಹಿಂದಿನ ದಿನ ರಾತ್ರಿ ಕೆಲಸ ಮಾಡಿ‌ ಕರೆಂಟ್ ವೈರ್​ ಹಾಗೆ ಬಿಟ್ಟು ಹೋಗಿದ್ದಾರೆ. ಆಗ ನಮ್ಮ ಹುಡುಗಿ ಬಂದು ಆ ವೈರ್ ತುಳಿದು, ಆಮೇಲೆ ಹುಡುಗಿ ಒದ್ದಾಡುತ್ತಿದ್ದ ನೋಡಿ, ತಡೆಯಲು ಹೋದ ಅಜ್ಜ ಹಾಗೂ ಅಜ್ಜಿ ಕೂಡ ಸಾವನ್ನಪ್ಪಿದ್ದಾರೆ. ಇದಕ್ಕೆ ಈ ಮನೆ ಮಾಲೀಕರು ಹಾಗೂ ಗುತ್ತಿಗೆದಾರರನೇ ಹೊಣೆಗಾರರು. ಅವರ ಬೇಜವಾಬ್ದಾರಿಯಿಂದಲೇ ಮೂರು ಜೀವಗಳು ಬಲಿಯಾಗಿವೆ. ಮೃತ ಬಾಲಕಿಯ ತಂದೆ ಅಂಗವಿಕಲನಿದ್ದು, ಆತನಿಗೆ ದುಡಿಯಲು ಆಗುವುದಿಲ್ಲ‌. ಈ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು” ಎಂದು ಒತ್ತಾಯಿಸಿದರು.


Spread the love

About Laxminews 24x7

Check Also

‘ಪಡಿತರ ಅಕ್ರಮ ತಡೆಗೆ ಅಂಗಡಿಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಿ’: ಗ್ಯಾರಂಟಿ ಅನುಷ್ಠಾನ ಸಮಿತಿ ಸೂಚನೆ

Spread the loveಗಂಗಾವತಿ: “ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ‘ಅನ್ನಭಾಗ್ಯ’ ಪಡಿತರ ಫಲಾನುಭವಿಗಳಿಗೆ ತಲುಪದೇ ಬಹುತೇಕ ಧಾನ್ಯ ಕಳ್ಳರ ಪಾಲಾಗುತ್ತಿದ್ದು, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ