Breaking News

ವಿಜೇತರ ಪಟ್ಟಿ: ಪ್ರಶಸ್ತಿ ಮುಡಿಗೇರಿಸಿಕೊಂಡ ‘ಸೀತಾ ರಾಮಂ’ , ‘ಪಠಾಣ್​’

Spread the love

ಮೆಲ್ಬೋರ್ನ್ (ಆಸ್ಟ್ರೇಲಿಯಾ): ಬಾಲಿವುಡ್ ನಟ ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ‘ಪಠಾಣ್’ ಚಿತ್ರ ಭಾರಿ ಗಳಿಕೆ ಮಾಡುವ ಮೂಲದ ದೇಶ ಮಾತ್ರವಲ್ಲದೇ, ವಿಶ್ವದೆಲ್ಲೆಡೆ ಸದ್ದು ಮಾಡಿತ್ತು. ಇದೀಗ ಮತ್ತೊಮ್ಮೆ ‘ಪಠಾಣ್’​ ಶಾರುಖ್ ಖಾನ್ ಅಭಿಮಾನಿಗಳಲ್ಲಿ ಸಂತಸವನ್ನ ತಂದಿದೆ. ಶುಕ್ರವಾರ ನಡೆದ ಇಂಡಿಯನ್ ಫಿಲ್ಮ್ ಫೆಸ್ಟಿವಲ್ ಆಫ್ ಮೆಲ್ಬೋರ್ನ್ (IFFM) ನ 14 ನೇ ಆವೃತ್ತಿಯಲ್ಲಿ ಪೀಪಲ್ಸ್ ಚಾಯ್ಸ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.

ಸಿದ್ಧಾರ್ಥ್ ಆನಂದ್ ನಿರ್ದೇಶನದ ಪಠಾಣ್ ಸಿನಿಮಾ​ ಜನವರಿ 25ರಂದು ಬಿಡುಗಡೆ ಆಗಿ ಭಾರತೀಯ ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸಿತ್ತು. ಜಾನ್ ಅಬ್ರಹಾಂ, ದೀಪಿಕಾ ಪಡುಕೋಣೆ, ಡಿಂಪಲ್ ಕಪಾಡಿಯಾ ಮತ್ತು ಅಶುತೋಷ್ ರಾಣಾ ಸೇರಿದಂತೆ ಇತರರು ಸಿನಿಮಾದಲ್ಲಿ ನಟಿಸಿದ್ದಾರೆ. ಜಾಗತಿಕ ಗಲ್ಲಾಪೆಟ್ಟಿಗೆಯಲ್ಲಿ 1050 ಕೋಟಿಗೂ ಹೆಚ್ಚು ಗಳಿಕೆ ಮಾಡುವ ಮೂಲಕ ಹಲವಾರು ಬಾಕ್ಸ್ ಆಫೀಸ್ ದಾಖಲೆಗಳನ್ನು ಮುರಿದಿದೆ. ಜೊತೆಗೆ, ಹಿಂದಿ ಚಿತ್ರರಂಗದ ಇತಿಹಾಸದಲ್ಲೇ ಇದು ವಿಶ್ವಾದ್ಯಂತ ಅತಿ ಹೆಚ್ಚು ಗಳಿಕೆ ಮಾಡಿದ ಚಲನಚಿತ್ರವಾಗಿದೆ. ಶ್ರೀಧರ್ ರಾಘವನ್ ಚಿತ್ರಕಥೆ ಬರೆದಿರುವ ಸಿನಿಮಾವನ್ನು ಯಶ್ ರಾಜ್ ಫಿಲ್ಮ್ಸ್​​ ನಿರ್ಮಿಸಿದೆ.

ಇನ್ನು ‘ಸೀತಾ ರಾಮಂ’ ಅತ್ಯುತ್ತಮ ಚಿತ್ರವೆಂದು (Best Film) ಮತ್ತು ‘ಆಗ್ರಾ’ ಅತ್ಯುತ್ತಮ ಇಂಡಿ ಚಿತ್ರ ಎಂದು ಘೋಷಿಸಲಾಯಿತು. ‘ಮಿಸೆಸ್ ಚಟರ್ಜಿ Vs ನಾರ್ವೆ’ ಚಿತ್ರದಲ್ಲಿನ ಅಭಿನಯಕ್ಕಾಗಿ ರಾಣಿ ಮುಖರ್ಜಿ ಅತ್ಯುತ್ತಮ ನಟಿ ಪ್ರಶಸ್ತಿ ( Best Actor) ಮುಡಿಗೇರಿಸಿಕೊಂಡರು. ನಟ ಮೋಹಿತ್ ಅಗರ್ವಾಲ್ ಅವರು ‘ಆಗ್ರಾ’ ಚಿತ್ರಕ್ಕಾಗಿ (Best Performance (Male) in Film) ಅತ್ಯುತ್ತಮ ಅಭಿನಯ (ಪುರುಷ) ಪ್ರಶಸ್ತಿಯನ್ನು ಪಡೆದರು. ಹಾಗೆಯೇ, ಕಾರ್ತಿಕ್ ಆರ್ಯನ್ ಅವರಿಗೆ ‘ದಿ ರೈಸಿಂಗ್ ಗ್ಲೋಬಲ್ ಸೂಪರ್‌ಸ್ಟಾರ್ ಆಫ್ ಇಂಡಿಯನ್ ಸಿನಿಮಾ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಜೊತೆಗೆ, ಚಲನಚಿತ್ರ ನಿರ್ಮಾಪಕ ಕರಣ್ ಜೋಹರ್ ಅವರು ಭಾರತೀಯ ಚಲನಚಿತ್ರೋದ್ಯಮದಲ್ಲಿ 25 ವರ್ಷಗಳನ್ನು ಪೂರೈಸಿದ ಹಿನ್ನೆಲೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

 

ಪ್ರಶಸ್ತಿ ಸ್ವೀಕರಿಸಿದ ನಂತರ ಮಾತನಾಡಿದ ರಾಣಿ ಮುಖರ್ಜಿ,”ಮಿಸೆಸ್ ಚಟರ್ಜಿ ವರ್ಸಸ್ ನಾರ್ವೆ ಸಿನಿಮಾವನ್ನು ವಿಶ್ವಾದ್ಯಂತ ಪ್ರೇಕ್ಷಕರು ಪ್ರೀತಿಯಿಂದ ಮೆಚ್ಚಿಕೊಂಡಿದ್ದಾರೆ. ನಿಮ್ಮೆಲ್ಲರ ಅಭಿಮಾನಕ್ಕೆ ನಾನು ಕೃತಜ್ಞನಾಗಿದ್ದೇನೆ. ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಗೆದ್ದಿರುವುದು ಖುಷಿ ನೀಡಿದೆ. ನನ್ನ ಅಭಿನಯಕ್ಕೆ ಚಪ್ಪಾಳೆ ಮತ್ತು ಮೆಚ್ಚುಗೆ ವ್ಯಕ್ತಪಡಿಸಿದ ಎಲ್ಲರಿಗೂ ಪ್ರಾಮಾಣಿಕವಾಗಿ ಧನ್ಯವಾದ ಹೇಳುತ್ತೇನೆ. ಈ ಅತ್ಯುತ್ತಮ ನಟಿ ಪ್ರಶಸ್ತಿಯು ನನ್ನ ಹೃದಯದಲ್ಲಿ ವಿಶೇಷ ಸ್ಥಾನವನ್ನು ಪಡೆದಿದೆ. ಏಕೆಂದರೆ, ನಾನು ಗೌರವವನ್ನು ಮೆಲ್ಬೋರ್ನ್‌ನಲ್ಲಿ ನಡೆಯುತ್ತಿರುವ IFFM ನಲ್ಲಿ ಸ್ವೀಕರಿಸುತ್ತಿದ್ದೇನೆ” ಎಂದಿದ್ದಾರೆ.

ಮಿಸೆಸ್ ಚಟರ್ಜಿ ವರ್ಸಸ್ ನಾರ್ವೆ ಸಿನಿಮಾದಲ್ಲಿ ನಟಿ ರಾಣಿ ಮುಖರ್ಜಿ ದೇಬಿಕಾ ಚಟರ್ಜಿ ಪಾತ್ರಕ್ಕೆ ಜೀವ ತುಂಬಿದ್ದರು. ತಮ್ಮ ಮಕ್ಕಳ ರಕ್ಷಣೆಗಾಗಿ ನಾರ್ವೇಜಿಯನ್ ಸರ್ಕಾರದ ವಿರುದ್ಧ ಹೋರಾಡುವ ತಾಯಿಯ ಕಥೆಯನ್ನು ಈ ಚಿತ್ರ ಒಳಗೊಂಡಿದೆ. ಅಶಿಮಾ ಚಿಬ್ಬರ್ ನಿರ್ದೇಶನದ ಈ ಚಿತ್ರದಲ್ಲಿ ನೀನಾ ಗುಪ್ತಾ, ಜಿಮ್ ಸರ್ಭ್ ಮತ್ತು ಅನಿರ್ಬನ್ ಭಟ್ಟಾಚಾರ್ಯ ಸೇರಿದಂತೆ ಅನೇಕರು ನಟಿಸಿದ್ದಾರೆ.

ಪ್ರಶಸ್ತಿ ಪಡೆದ ವಿಜೇತರ ಮಾಹಿತಿ:

  • ಅತ್ಯುತ್ತಮ ಸಾಕ್ಷ್ಯಚಿತ್ರ – ಟು ಕಿಲ್​ ಎ ಟೈಗರ್​ (To Kill A Tiger)
  • ಅತ್ಯುತ್ತಮ ಇಂಡಿ ಚಿತ್ರ – ಆಗ್ರಾ (Agra)
  • ಅತ್ಯುತ್ತಮ ಅಭಿನಯ (ಪುರುಷ) ಪ್ರಶಸ್ತಿ – ಮೋಹಿತ್ ಅಗರ್ವಾಲ್
  • ಅತ್ಯುತ್ತಮ ಅಭಿನಯ (ಮಹಿಳಾ) ಪ್ರಶಸ್ತಿ – ರಾಣಿ ಮುಖರ್ಜಿ
  • ಅತ್ಯುತ್ತಮ ನಿರ್ದೇಶಕ – ಪೃಥ್ವಿ ಕೊಣನೂರು – ಹದಿನೆಲೆಂಟು (Seventeeners)
  • ಅತ್ಯುತ್ತಮ ಚಿತ್ರ- ಸೀತಾ ರಾಮಂ
  • ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ (ಪುರುಷ)- ವಿಜಯ್ ವರ್ಮಾ (ದಹಾದ್‌)
  • ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ (ಮಹಿಳಾ). ರಾಜಶ್ರೀ ದೇಶಪಾಂಡೆ (ಅಗ್ನಿಪರೀಕ್ಷೆ)
  • ಅತ್ಯುತ್ತಮ ಸರಣಿ (Best Series) – ಜುಬಿಲಿ
  • ಅತ್ಯುತ್ತಮ ಕಿರುಚಿತ್ರ (ಜನರ ಆಯ್ಕೆ) – ನೀಲೇಶ್ ನಾಯ್ಕ್ ಅವರ ಕನೆಕ್ಷನ್ ಕ್ಯಾ ಹೈ (Connection Kya Hain)
  • ಅತ್ಯುತ್ತಮ ಕಿರುಚಿತ್ರ – ಆಸ್ಟ್ರೇಲಿಯಾ -ಮಾರ್ಕ್ ರಸ್ಸೆಲ್ ಬರ್ನಾರ್ಡ್ (Home)
  • ಡಿಸ್ಟ್ರಪ್ಟರ್ ಪ್ರಶಸ್ತಿ (Disruptor Award ) – ಭೂಮಿ ಪೆಡ್ನೇಕರ್

Spread the love

About Laxminews 24x7

Check Also

ಸರಕಾರದ ಗಮನಸೆಳೆದ ಮಾದರಿ ಯೋಜನೆ ಸಿಇಟಿ ಸಕ್ಷಮ್”ಕ್ಕೆ 10 ಲಕ್ಷ ರೂಪಾಯಿ ಅನುದಾನ

Spread the loveಬೆಳಗಾವಿ, ನ.25(ಕರ್ನಾಟಕ ವಾರ್ತೆ): ಸರ್ಕಾರಿ ಪದವಿ ಪೂರ್ವ ವಿದ್ಯಾಲಯಗಳಲ್ಲಿ ವಿಜ್ಞಾನ ವ್ಯಾಸಂಗ ಮಾಡುತ್ತಿರುವ ಜಿಲ್ಲೆಯ ಗ್ರಾಮೀಣ ಪ್ರದೇಶದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ