ಬೆಂಗಳೂರು : ಗುತ್ತಿಗೆದಾರರ ಸಂಶಯ ನಿವಾರಣೆ ಮಾಡುವ ಕೆಲಸ ಬಿಟ್ಟು ರಾಜಕೀಯ ನಿವೃತ್ತಿ ಮಾತು ಹೇಳಿದ್ದಾರೆ.
ಇಂತಹ ನಿಮ್ಮ ನಿವೃತ್ತಿ ಭಾಷಣವನ್ನು ನಾವು ಎಷ್ಟು ಕೇಳಿಲ್ಲ? ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಬಸವರಾಜ ಬೊಮ್ಮಾಯಿ ತಿರುಗೇಟು ಕೊಟ್ಟರು.
ಮಹಾಲಕ್ಷ್ಮಿ ಲೇಔಟ್ನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಕಾಲದಲ್ಲಿ ಬಿಡುಗಡೆಯಾಗಿರುವ 650 ಕೋಟಿ ರೂ ಹಣವನ್ನು ಯಾಕೆ ಇಟ್ಟುಕೊಂಡಿದ್ದೀರಿ, 3 ತಿಂಗಳಾಗಿದೆ ತನಿಖೆಯಾಗಿರಬೇಕಲ್ಲವೇ? ನಾವು ಜನವರಿಯಲ್ಲಿ ಪಾವತಿ ಮಾಡಿ ನಂತರದ ಮೂರು ತಿಂಗಳಿಗೆ ಬೇಕಾದ ಹಣ ಬಿಡುಗಡೆ ಮಾಡಿದ್ದೇವೆ. ಅದನ್ನು ಪರಾಮರ್ಶೆ ಮಾಡಿ ಬಿಡುಗಡೆ ಮಾಡಬೇಕಲ್ಲವೇ? ಗುತ್ತಿಗೆದಾರರೇ ಆಣೆ ಪ್ರಮಾಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಸಂಶಯ ನಿವಾರಣೆ ಮಾಡುವ ಕೆಲಸ ಮಾಡುವುದು ಬಿಟ್ಟು ರಾಜಕೀಯ ನಿವೃತ್ತಿ ಮಾತು ಹೇಳಿದ್ದಾರೆ ಎಂದರು.
ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಈ ಸರ್ಕಾರಕ್ಕೆ ಕ್ಲೀನ್ ಚಿಟ್ ಕೊಟ್ಟಿದ್ದಾರೆ. ಆದರೆ ಅವರದೇ ಸದಸ್ಯರು ಬಿಲ್ ಪಾವತಿಗೆ ಕಮಿಷನ್ ಕೇಳಿದ್ದಾರೆ ಎಂದು ನಿನ್ನೆ ಆರೋಪಿಸಿದ್ದರು. ಸುದ್ದಿಗೋಷ್ಟಿ ನಡೆಸಿ ಶಾಂಗ್ರಿಲಾ ಹೋಟೆಲ್ನಲ್ಲಿ ಪರ್ಸೆಂಟೇಜ್ ನಡೆಯುತ್ತಿದೆ ಎಂದಿದ್ದರು. ಆದರೆ ಇಂದು ಯೂಟರ್ನ್ ಹೊಡೆದಿದ್ದಾರೆ. ಇದಕ್ಕೆ ಅವರೇ ಉತ್ತರ ಕೊಡಬೇಕು. ಯಾಕೆ ಯೂಟರ್ನ್ ಹೊಡೆದರು? ಯಾಕೆ ಆಪಾದನೆ ಮಾಡಿದರು? ಕ್ಲೀನ್ ಚಿಟ್ ಯಾಕೆ ಕೊಟ್ಟರು? ಅವರಿಗೆ ಏನಾದರೂ ಒತ್ತಡ ಇದೆಯಾ? ಎಂದು ತಿಳಿಸಬೇಕು.
ಕ್ಲೀನ್ ಚಿಟ್ ಕೊಟ್ಟರೆ ಗುತ್ತಿಗೆದಾರರಿಗೆ ಪರಿಹಾರ ಸಿಗಬೇಕಲ್ಲ?. ಈಗ ಅವರ ಸಮಸ್ಯೆ ಯಾರು ಪರಿಹರಿಸುವವರು, ನಾವು ಮಾರ್ಚ್ ವರೆಗಿನ ಹಣ ಬಿಡುಗಡೆ ಮಾಡಿದ್ದು, ಅದನ್ನು ಕೊಡಬೇಕಲ್ಲ?. ಡಿ.ಕೆ.ಶಿವಕುಮಾರ್ ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡದ ಕಾರಣ ಕೆಂಪಣ್ಣ ಬಳಿ ಹೋಗಿದ್ದಾರೆ. ನಂತರ ಸಿಎಂ ಸಿದ್ದರಾಮಯ್ಯ, ಡಿಸಿಎಂ ಸೇರಿದಂತೆ ಜನಪ್ರತಿನಿಧಿಗಳ ನಂತರ ರಾಜ್ಯಪಾಲರ ಬಳಿ ಹೋಗಿದ್ದಾರೆ. ಹಿಂದೆ ಹೀಗಾಗಿತ್ತಾ? ಬಿಬಿಎಂಪಿ ಸಂಗ್ರಹಿಸಿದ ಹಣವನ್ನೂ ಕೊಡುತ್ತಿಲ್ಲ. ಸರ್ಕಾರದ ಹಣವನ್ನೂ ಕೊಡುತ್ತಿಲ್ಲ ಎಂದರೆ ಕೆಲಸ ಹೇಗೆ ನಡೆಯಬೇಕು? ಗುತ್ತಿಗೆದಾರರು ದಯಾಮರಣ ಕೇಳಿದ್ದಾರೆ.