ರಾಯಚೂರು : ಜಿಲ್ಲೆಯ ಮಾನವಿ ತಾಲೂಕಿನ ಚಿಕಲಪರ್ವಿ ಗ್ರಾಮ ಸೇರಿದಂತೆ ವಿವಿಧೆಡೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಟಿಪ್ಪರ್ ಹಾಗೂ ಜೆಸಿಬಿ ಜಪ್ತಿ ಮಾಡಿಕೊಂಡಿದ್ದಾರೆ.
ಈ ವೇಳೆ ಆರು ಜನರ ತಂಡವೊಂದು ರಕ್ಷಣಾ ಸಿಬ್ಬಂದಿಯೊಬ್ಬರ ಮೇಲೆ ಹಲ್ಲೆ ಮಾಡಿದ್ದು, ಅಧಿಕಾರಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.
ಮಾಜಿ ಸೈನಿಕ ಹಾಗೂ ಖನಿಜಾ ರಕ್ಷಣಾ ಪಡೆಯ ಸಿಬ್ಬಂದಿ ನೀಲಪ್ಪ ಹಲ್ಲೆಗೊಳಗಾದವರು. ಕಬ್ಬಿಣದ ರಾಡ್ನಿಂದ ಹಲ್ಲೆ ಮಾಡಲಾಗಿದ್ದು, ತೀವ್ರವಾಗಿ ಗಾಯಗೊಂಡ ಅವರನ್ನು ಮಾನವಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಯಿತು. ಬಳಿಕ, ಹೆಚ್ಚಿನ ಚಿಕಿತ್ಸೆಗಾಗಿ ರಾಯಚೂರು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ತುಂಗಭದ್ರಾ ನದಿ ತೀರದಲ್ಲಿ ಅಕ್ರಮ ಮರಳುಗಾರಿಕೆ ದಂಧೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮಾನ್ವಿ ಪೊಲೀಸರು ಮತ್ತು ಮೈನಿಂಗ್ ಇಲಾಖೆಯ ಅಧಿಕಾರಿಗಳ ನೇತೃತ್ವದಲ್ಲಿ ಜಂಟಿ ಕಾರ್ಯಾಚರಣೆ ನಡೆಸಲಾಯಿತು. ಮಾನ್ವಿ ತಾಲೂಕಿನ ಚಿಕಲಪರ್ವಿ ಕ್ಯಾಂಪ್ ಸುತ್ತಮುತ್ತ ದಾಳಿ ನಡೆಸಲಾಯಿತು. ಈ ವೇಳೆ, ಅಕ್ರಮ ಮರಳುಗಾರಿಕೆಗೆ ಬಳಸಿದ ಜೆಸಿಬಿ ಸೇರಿದಂತೆ ಮರಳು ಸಮೇತ ಟಿಪ್ಪರ್ ವಾಹನಗಳನ್ನು ಗಣಿ ಮತ್ತು ಭೂವಿಜ್ಞಾನ ಅಧಿಕಾರಿಗಳ ತಂಡ ಜಪ್ತಿ ಮಾಡಿಕೊಂಡಿದೆ.
ಜಪ್ತಿ ಮಾಡಿದ ವಾಹನಗಳನ್ನು ಮಾನ್ವಿ ಠಾಣೆಗೆ ತೆಗೆದುಕೊಂಡು ಹೋಗುತ್ತಿದ್ದಾಗ ಮಾರ್ಗ ಮಧ್ಯೆ ಏಕಾಏಕಿ ಆಗಮಿಸಿದ ಆರು ಮಂದಿ, ಕಬ್ಬಿಣದ ರಾಡ್ನಿಂದ ಅಧಿಕಾರಿಗಳ ಮೇಲೆ ಹಲ್ಲೆ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಮಂಜುನಾಥ ಜಿ ಮಾನವಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರಿನ ಆಧಾರ ಮೇಲೆ ಐಪಿಸಿ ಸೆಕ್ಷನ್ 143,147,148, 307, 323, 326, 341, 343 , 504, 506 ಸೇರಿದಂತೆ 149 ರ ಅಡಿ ಪ್ರಕರಣ ದಾಖಲಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.