ಬೆಂಗಳೂರು: ಮಹಿಳೆಗೆ ನಿಂದಿಸಿ ಹಲ್ಲೆ ಮಾಡಿದ ಆರೋಪದ ಮೇಲೆ ಕ್ಯಾಬ್ ಚಾಲಕನನ್ನು ಬೆಳ್ಳಂದೂರು ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಪತ್ನಿಯ ಮೇಲೆ ಹಲ್ಲೆ ಮಾಡಿರುವುದಾಗಿ ಮಹಿಳೆಯ ಪತಿ ನೀಡಿದ ದೂರಿನ ಆಧಾರದ ಮೇಲೆ ಕ್ಯಾಬ್ ಚಾಲಕ ಬಸವರಾಜ್ ಎಂಬಾತನನ್ನು ವಶಕ್ಕೆ ಪಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಬೆಳ್ಳಂದೂರಿನ ಬೋಗನಹಳ್ಳಿಯ ಅಪಾರ್ಟ್ಮೆಂಟ್ನಲ್ಲಿ ಮಹಿಳೆಯ ಕುಟುಂಬ ವಾಸವಾಗಿದೆ. ಮಗನ ಚಿಕಿತ್ಸೆ ಸಲುವಾಗಿ ಬುಧವಾರ ಬೋಗನಹಳ್ಳಿಯಿಂದ ಮಣಿಪಾಲ್ ಆಸ್ಪತ್ರೆಗೆ ತೆರಳಲು ಮಹಿಳೆಯು ಕ್ಯಾಬ್ ಬುಕ್ ಮಾಡಿದ್ದರು. ಅಪಾರ್ಟ್ಮೆಂಟ್ನಿಂದ ಹೊರಬರುತ್ತಿದ್ದಂತೆ ಬಂದ ಕ್ಯಾಬ್ನ್ನು ತಾಯಿ-ಮಗ ಹತ್ತಿಕೊಂಡು ತೆರಳಿದ್ದು, ಆದರೆ ಸುಮಾರು ನೂರು ಮೀಟರ್ ದೂರದವರೆಗೆ ಹೋಗುವಷ್ಟರಲ್ಲಿ ತಾನು ಬುಕ್ ಮಾಡಿದ ಕ್ಯಾಬ್ ಇದಲ್ಲ ಎಂಬುದು ಮಹಿಳೆಯ ಅರಿವಿಗೆ ಬಂದಿದೆ. ಹೀಗಾಗಿ, ಕೂಡಲೇ ಕ್ಯಾಬ್ ನಿಲ್ಲಿಸುವಂತೆ ಚಾಲಕನಿಗೆ ಕೇಳಿಕೊಂಡಿದ್ದಾರೆ. ಆದರೆ ಇದರಿಂದ ಅಸಮಾಧಾನಗೊಂಡ ಚಾಲಕ ಮಹಿಳೆ ಮಾತಿನ ಚಕಮಕಿ ನಡೆಸಿದ್ದಾನೆ. ಕಾರಿನಿಂದ ಇಳಿಯುತ್ತಿದ್ದಂತೆ ಮಹಿಳೆ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಚಾಲಕನು ಮಹಿಳೆ ಮೇಲೆ ಹಲ್ಲೆ ನಡೆಸುತ್ತಿರುವ ದೃಶ್ಯವು ಸಮೀಪದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಮಹಿಳೆಯು ಕಿರುಚಾಡುತ್ತಿದ್ದಂತೆ ಅಪಾರ್ಟ್ ಮೆಂಟ್ ನಿವಾಸಿಗಳು ಅವರ ನೆರವಿಗೆ ಧಾವಿಸಿದ್ದಾರೆ. ಆದರೆ ಜನರು ಬರುಷ್ಟರಲ್ಲೇ ಕ್ಯಾಬ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ಸಂಬಂಧ ಮಹಿಳೆಯ ಪತಿ ನೀಡಿದ ದೂರಿನ ಆಧಾರದ ಮೇಲೆ ಕ್ಯಾಬ್ ಚಾಲಕನನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
Laxmi News 24×7