ಬೆಳಗಾವಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಸ್ಮಾರ್ಟ್ ಸಿಟಿ ಮೊದಲ ಪಟ್ಟಿಯಲ್ಲೇ ಬೆಳಗಾವಿ ಜಿಲ್ಲೆ ಸ್ಥಾನ ಪಡೆದಿದ್ದರಿಂದ ಕುಂದಾನಗರಿ ಜನ ಸಂಭ್ರಮಿಸಿದ್ದರು.
ಆದರೆ ಸ್ಮಾರ್ಟ್ ಸಿಟಿ ಯೋಜನೆಯಿಂದ ಯಾವುದೇ ಉಪಯೋಗ ಆಗಿಲ್ಲವೆಂದು ಜನ ಆರೋಪಿಸುತ್ತಿದ್ದಾರೆ.
ಸ್ಮಾರ್ಟ್ ಸಿಟಿ ಯೋಜನೆ ಅಂದಾಕ್ಷಣ ಬೆಳಗಾವಿ ಜನ ನಮ್ಮ ಕುಂದಾನಗರಿ ಸ್ಮಾರ್ಟ್ ಸಿಟಿ ಆಗುತ್ತದೆ, ನಮಗೆಲ್ಲಾ ಒಳ್ಳೆಯ ಸೌಲಭ್ಯಗಳು ಸಿಗುತ್ತವೆ ಅಂದುಕೊಂಡಿದ್ದರು. ಆದರೆ ತಮ್ಮ ನಂಬಿಕೆಗಳು ಮಾತ್ರ ಹುಸಿಯಾಗಿವೆ. ನಗರದ ಧರ್ಮವೀರ ಸಂಭಾಜಿ ವೃತ್ತದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಿಸಿರುವ ಎರಡು ಇ-ಶೌಚಾಲಯಗಳು ಗಬ್ಬೆದ್ದು ನಾರುತ್ತಿವೆ ಅನ್ನುತ್ತಿದ್ದಾರೆ ಇಲ್ಲಿನ ಜನರು.
ಇವುಗಳನ್ನು ಕಟ್ಟಿ ಎರಡು ವರ್ಷವಾದ್ರೂ ಉದ್ಘಾಟನೆ ಭಾಗ್ಯ ಕಂಡಿಲ್ಲ. ಇದರಿಂದ ಇ-ಶೌಚಾಲಯಗಳು ಇದ್ದು ಇಲ್ಲದಂತಾಗಿವೆ. ಇನ್ನು ಇಲ್ಲಿಯೇ ಪಕ್ಕದಲ್ಲಿ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕ ಬಂದ್ ಆಗಿ ಎರಡು ವರ್ಷ ಮೇಲಾಯ್ತು. ಇತ್ತ ಯಾವೊಬ್ಬ ಅಧಿಕಾರಿಯೂ ಲಕ್ಷ್ಯ ವಹಿಸದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಬಗ್ಗೆ ಈಟಿವಿ ಭಾರತ್ ಜೊತೆಗೆ ಮಾತನಾಡಿದ ಆಟೋ ಚಾಲಕ ಮಹಮ್ಮದ್ ನಿಯಾಜ್ ಶೇಖ್, ಇವುಗಳನ್ನು ರಿಪೇರಿ ಮಾಡಿ ಆರಂಭಿಸಬೇಕು. ಇಲ್ಲವಾದರೆ ತೆರವುಗೊಳಿಸಬೇಕು. ಇ-ಟಾಯ್ಲೆಟ್ಗಳು ಚಾಲು ಇಲ್ಲ, ನೀರು ಕೂಡ ಇಲ್ಲ. ಆದರೂ ಒಂದಿಷ್ಟು ಜನ ರಾತ್ರಿ ಹೊತ್ತು ಬಂದು ಹಾಗೇ ಉಪಯೋಗಿಸಿ ಹೋಗುತ್ತಿದ್ದಾರೆ. ಇದರಿಂದ ಸುತ್ತಲೂ ದುರ್ವಾಸನೆ ಬೀರುತ್ತಿದೆ. ಪಕ್ಕದಲ್ಲೇ ಬಸ್ ಸ್ಟಾಪ್ ಇದ್ದು ಮಹಿಳೆಯರು, ಕಾಲೇಜು ವಿದ್ಯಾರ್ಥಿಗಳು ಇಲ್ಲಿ ಹೇಗೆ ಕುಳಿತುಕೊಳ್ಳಬೇಕು ಎಂದು ಪ್ರಶ್ನಿಸಿದರು.