ಬೆಂಗಳೂರು: ಗುತ್ತಿಗೆದಾರರು ನನ್ನ ಬಳಿಯೂ ಬಂದಿದ್ದು, ಯಾರು ಕೆಲಸ ಮಾಡಿದ್ದಾರೋ ಅವರಿಗೆ ಬಿಲ್ ಪಾವತಿ ಮಾಡಲಾಗುತ್ತೆ ಎಂದು ಹೇಳಿದ್ದೇನೆ.
ನೀರಾವರಿ ಇಲಾಖೆಗೆ 25 ಸಾವಿರ ಕೋಟಿ ರೂ. ಮೊತ್ತದ ಕಾಮಗಾರಿ ಬಿಲ್ ನೀಡಿದ್ದಾರೆ. 600 ಕೋಟಿ ರೂ. ಹಣ ಇಲಾಖೆಯಲ್ಲಿ ಇದೆ. ಗುತ್ತಿಗೆದಾರರಿಗೆ ನಿಯಮದ ಪ್ರಕಾರ ಬಿಲ್ ಪಾವತಿ ಆಗುತ್ತೆ. ಬ್ಲ್ಯಾಕ್ ಮೇಲ್ಗಳಿಗೆಲ್ಲಾ ಹೆದರಲ್ಲ. ಯಾರನ್ನೋ ಹೆದರಿಸಿದಂತೆ ನನ್ನನ್ನು ಹೆದರಿಸಲು ಆಗುತ್ತಾ?. ನನಗೆ ಬೆದರಿಕೆ ಹಾಕಲು ಆಗುತ್ತಾ?. ಹಾಕಲಿ ಬಿಡಿ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಸವಾಲು ಹಾಕಿದ್ದಾರೆ.
ಇಂದು ಕುಮಾರಕೃಪ ಅತಿಥಿಗೃಹದಲ್ಲಿ ಮಾತನಾಡಿದ ಅವರು, ಅಜ್ಜಯ್ಯನ ಮಠಕ್ಕೆ ಬಂದು ಪ್ರಮಾಣ ಮಾಡಲಿ ಎಂಬ ಗುತ್ತಿಗೆದಾರರ ಸವಾಲು ವಿಚಾರವಾಗಿ ಪ್ರತಿಕ್ರಿಯಿಸಿ, ಈ ಆರೋಪದ ಬಗ್ಗೆ ನಮಗೆ ಗೊತ್ತಿಲ್ಲ. ಯಾವ ಬಿಲ್ ವಿಚಾರವೂ ನನಗೆ ಗೊತ್ತಿಲ್ಲ. ಯಾವ ಗುತ್ತಿಗೆದಾರನ ಬಳಿಯೂ ನಾನು ಮಾತನಾಡಿಲ್ಲ. ನನಗೆ ಪ್ರಜ್ಞೆ ಇದೆ. ನನಗೆ ರಾಜಕಾರಣ ಗೊತ್ತಿದೆ. ಯಾರ ಹಿಂದೆ ಯಾರಿದ್ದಾರೆ ಎಂಬುದು ಗೊತ್ತಿದೆ. ಅವರು ಏನು ಬೇಕಾದರು ಮಾಡಲಿ ಎಂದರು.
ನಾವು ಕಾನೂನಿನ ಚೌಕಟ್ಟಿನಲ್ಲಿ ಕೆಲಸ ಮಾಡುತ್ತೇವೆ. ಈ ಬ್ಲ್ಯಾಕ್ಮೇಲ್, ಥ್ರೆಟ್, ಬೆದರಿಕೆ, ರಾಜ್ಯಪಾಲರಿಗೆ ದೂರು ಕೊಡುವುದು, ಪ್ರಧಾನಿಗೆ ದೂರು ಕೊಡುವುದು ಏನು ಬೇಕಾದರು ಮಾಡಲಿ. ಕುಮಾರಸ್ವಾಮಿಯವರು ಗುತ್ತಿಗೆದಾರರನ್ನು ಭೇಟಿ ಮಾಡಿರುವುದು ಸ್ವಾಭಾವಿಕ. ನಾವಿದ್ದಾಗಲೂ ಗುತ್ತಿಗೆದಾರರು ಭೇಟಿಯಾಗಿದ್ದರು. ಪ್ರತಿಪಕ್ಷಗಳು ಬರುವುದೇ ಇಂಥ ವಿಚಾರದ ಬಗ್ಗೆ ದನಿ ಎತ್ತಲು ಎಂದರು.