Breaking News

ಸಚಿವಾಲಯ ಕಚೇರಿಯಲ್ಲಿ ಬಾಂಬ್ ಇಟ್ಟಿದ್ದಾಗಿ ಬೆದರಿಕೆ; ಆತಂಕ ಸೃಷ್ಟಿಸಿದ ಹುಸಿ ​ಕರೆ, ಆರೋಪಿ ಬಂಧನ

Spread the love

ಮುಂಬೈ (ಮಹಾರಾಷ್ಟ್ರ): ಎರಡು ದಿನಗಳ ಹಿಂದಷ್ಟೇ ರೈಲುಗಳಲ್ಲಿ ಸರಣಿ ಬಾಂಬ್​ ಇಟ್ಟಿರುವುದಾಗಿ ಹುಸಿ ಬಾಂಬ್​ ಕರೆ ಮಾಡಿದ್ದ ವ್ಯಕ್ತಿಯನ್ನು ಬಂಧಿಸಿದ ಬೆನ್ನಲ್ಲೇ, ಇಂದು ಮತ್ತೊಂದು ಹುಸಿ ಬಾಂಬ್​ ಕರೆ ಬಂದು ಮುಂಬೈ ಪೊಲೀಸರ ನೆಮ್ಮದಿಗೆ ಭಂಗ ತಂದ ಘಟನೆ ನಡೆದಿದೆ.

ಘಟನೆಗೆ ಸಂಬಂಧಿಸಿದಂತೆ ಆಪಾದಿತ ವ್ಯಕ್ತಿಯನ್ನು ಬಂಧಿಸಲಾಗಿದೆ.

ಮುಂಬೈಯಲ್ಲಿನ ಸಚಿವಾಲಯದಲ್ಲಿ ಬಾಂಬ್​ ಇಟ್ಟಿರುವುದಾಗಿ ವ್ಯಕ್ತಿಯೊಬ್ಬ ಸೋಮವಾರ ರಾತ್ರಿ 10 ಗಂಟೆಗೆ ಕರೆ ಮಾಡಿ ಮಾಹಿತಿ ನೀಡಿದ್ದ. ತಕ್ಷಣವೇ ಪೊಲೀಸರಿಗೆ ಮಾಹಿತಿ ಸಿಕ್ಕ ಬಳಿಕ ಕಾರ್ಯಾಚರಣೆ ನಡೆಸಲಾಗಿದ್ದು, 61 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ. ಈತ ಯಾಕಾಗಿ ಬೆದರಿಕೆ ಕರೆ ಮಾಡಿದ್ದ ಎಂಬ ಬಗ್ಗೆ ಮಾಹಿತಿ ಕರೆ ಹಾಕಲಾಗುತ್ತಿದೆ.

ಪ್ರಕಾಶ್​ ಖೇಮಾನಿ ಬಂಧಿತ ಆರೋಪಿ. ಸಚಿವಾಲಯಗಳ ಸಂಕೀರ್ಣದ ಪ್ರಧಾನ ಕಚೇರಿಗೆ ಕರೆ ಮಾಡಿದ ವ್ಯಕ್ತಿ, ಕಟ್ಟಡದಲ್ಲಿ ಬಾಂಬ್​ ಇಡಲಾಗಿದೆ. ಭಯೋತ್ಪಾದಕ ದಾಳಿ ನಡೆಯಲಿದೆ ಎಂದು ಹೇಳಿದ್ದ. ಕೂಡಲೇ ಸಂಬಂಧಪಟ್ಟವರು ಉನ್ನತಾಧಿಕಾರಿಗಳಿಗೆ ಮಾಹಿತಿ ರವಾನಿಸಿದ್ದಾರೆ. ಬಳಿಕ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ಸ್ಥಳದಲ್ಲಿ ಯಾವುದೇ ಬಾಂಬ್​ ಮತ್ತಿತರ ಯಾವುದೇ ವಸ್ತುಗಳು ಸಿಕ್ಕಿಲ್ಲ. ಇದರಿಂದ ಇದೊಂದು ಹುಸಿ ಕರೆಯಾಗಿದೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ. ಬಳಿಕ ಕಾಲ್​ ಟ್ರ್ಯಾಕ್​ ಮಾಡಿದ ಪೊಲೀಸರು ಪಶ್ಚಿಮ ಉಪನಗರವಾದ ಕಂಡಿವಲಿಯಲ್ಲಿರುವ ಮನೆಯಿಂದ ಕಾಲ್​ ಬಂದಿದ್ದನ್ನು ಪತ್ತೆ ಮಾಡಿದ್ದಾರೆ. ಬಳಿಕ ಕಾಲ್​ ಮಾಡಿದ್ದು ಪ್ರಕಾಶ್​ ಖೇಮಾನಿ ಎಂಬುದು ಖಚಿತವಾದ ಬಳಿಕ ಆತನನ್ನು ಬಂಧಿಸಿದ್ದಾರೆ.

ಅಧಿಕಾರಿಗಳ ಪ್ರಕಾರ, ಖೇಮಾನಿ ಬಾಂಬ್​ ಇಟ್ಟಿರುವುದಾಗಿ ಬೆದರಿಕೆ ಹಾಕಿದ್ದರ ಉದ್ದೇಶವನ್ನು ಆರೋಪಿ ಬಾಯ್ಬಿಟ್ಟಿಲ್ಲ. ಖೇಮಾನಿ ವಿರುದ್ದ ಭಾರತೀಯ ದಂಡ ಸಂಹಿತೆ ಸೆಕ್ಷನ್ 182 (ಸುಳ್ಳು ಮಾಹಿತಿ, ಸಾರ್ವಜನಿಕ ನೆಮ್ಮದಿಗೆ ಭಂಗ) ಅಡಿಯಲ್ಲಿ ಬಂಧಿಸಲಾಗಿದೆ. ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ತಿಳಿಸಿದ್ದಾರೆ.

ಸರಣಿ ಬಾಂಬ್​ ಸ್ಫೋಟ ಬೆದರಿಕೆ: ಸ್ಥಳೀಯ ರೈಲುಗಳಲ್ಲಿ ಸರಣಿ ಬಾಂಬ್ ಸ್ಫೋಟಿಸುವ ಬೆದರಿಕೆ ಹಾಕಿದ ಪ್ರಕರಣ 2 ದಿನಗಳ ಹಿಂದಷ್ಟೇ ನಡೆದಿತ್ತು. ಎಚ್ಚೆತ್ತುಕೊಂಡ ಪೊಲೀಸರು, ಓರ್ವನನ್ನು ಬಂಧಿಸಿದ್ದರು. ಆರೋಪಿಯನ್ನು ಅಶೋಕ್​ ಮುಖಿಯಾ ಎಂದು ಗುರುತಿಸಲಾಗಿದೆ.

ಆರೋಪಿ ಮುಂಬೈ ಪೊಲೀಸ್​ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಲೋಕಲ್​ ಟ್ರೈನ್​ಗಳಲ್ಲಿ ಬಾಂಬ್ ಇಡಲಾಗಿದೆ ಎಂದು ಹೇಳಿದ್ದ. ಪೊಲೀಸರು ಯಾವ ರೈಲು, ಸ್ಥಳ ಎಂಬ ಬಗ್ಗೆ ಮಾಹಿತಿ ಕೇಳಿದಾಗ, ಕಾಲ್ ಕಟ್​ ಮಾಡಿದ್ದ. ಬಳಿಕ ಮೊಬೈಲ್​ ಸ್ವಿಚ್​ ಆಫ್​ ಮಾಡಿಕೊಂಡಿದ್ದ. ಆತಂಕದ ವಾತಾವರಣ ಉಂಟಾದ ಬಳಿಕ ತಕ್ಷಣವೇ ಎಚ್ಚೆತ್ತ ಪೊಲೀಸರು ಕಾರ್ಯಾಚರಣೆಗೆ ಇಳಿದು, ಇದೊಂದು ಹುಸಿ ಕರೆ ಎಂದು ಖಚಿತವಾದ ಬಳಿಕ ಆರೋಪಿಯನ್ನು ಬಂಧಿಸಿದ್ದಾರೆ.


Spread the love

About Laxminews 24x7

Check Also

ಕಬ್ಬಿಗೆ ₹3300 ದರ – ವಿಜಯಪುರದಲ್ಲಿ ಗೊಂದಲ: ಸಚಿವ ಎಂ.ಬಿ. ಪಾಟೀಲ್ ಸ್ಪಷ್ಟನೆ*

Spread the loveಕಬ್ಬಿಗೆ ₹3300 ದರ – ವಿಜಯಪುರದಲ್ಲಿ ಗೊಂದಲ: ಸಚಿವ ಎಂ.ಬಿ. ಪಾಟೀಲ್ ಸ್ಪಷ್ಟನೆ* ರಾಜ್ಯ ಸರ್ಕಾರ ಕಬ್ಬಿಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ