ಕೊಚ್ಚಿ: ಆನ್‌ಲೈನ್ ವಂಚನೆ ಪ್ರಕರಣದಲ್ಲಿ ಸಿಲುಕಿಕೊಂಡಿದ್ದ ಇಬ್ಬರು ಆರೋಪಿಗಳಿಂದ ಲಂಚ ಪಡೆದಿದ್ದಾರೆ ಎಂಬ ಆರೋಪದ ಮೇಲೆ ಕರ್ನಾಟಕದ ಓರ್ವ ಇನ್ಸ್ಪೆಕ್ಟರ್ ಸೇರಿ ನಾಲ್ವರು ಪೊಲೀಸ್ ಸಿಬ್ಬಂದಿಯನ್ನು ಕೊಚ್ಚಿಯಲ್ಲಿ ಕೇರಳ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕೇಸ್ನಲ್ಲಿ ಹೆಸರನ್ನು ಕೈಬಿಡಲು ಆರೋಪಿಗಳಿಂದ ಲಂಚ ಪಡೆದಿದ್ದರೆಂದು ಆರೋಪಿಸಲಾಗಿದೆ. ಹಣ ಪಡೆದು ಸಹ ಆರೋಪಿಯೊಬ್ಬರನ್ನು ಕರೆದುಕೊಂಡು ಹೋಗುತ್ತಿದ್ದಾಗ ಅವರ ಸಂಬಂಧಿಯೊಬ್ಬರು ಕೊಚ್ಚಿ ಪೊಲೀಸರಿಗೆ ದೂರು ನೀಡಿದ್ದಾರೆ. ಈ ದೂರಿನ ಅನ್ವಯ ತನಿಖೆಗಿಳಿದ ಕಲಮಶ್ಶೇರಿ ಪೊಲೀಸರು ವಾಹನ ತಡೆದು, ಕರ್ನಾಟಕದ ನಾಲ್ವರು ಪೊಲೀಸರನ್ನು ವಶಕ್ಕೆ ಪಡೆದು, 3.95 ಲಕ್ಷ ಹಣ ಜಪ್ತಿ ಮಾಡಿಕೊಂಡಿದ್ದಾರೆ.
ಕೇರಳ ಪೊಲೀಸ್ ವಶದಲ್ಲಿರುವವರು ಕರ್ನಾಟಕ ಸೈಬರ್ ಪೊಲೀಸ್ ವಿಭಾಗದ ಸಿಬ್ಬಂದಿಗಳಾಗಿದ್ದಾರೆ. ಕೇರಳ ವ್ಯಕ್ತಿಯೊಬ್ಬ ಆನ್ಲೈನ್ನಲ್ಲಿ ಬೆಂಗಳೂರಿನ ವ್ಯಕ್ತಿಯೊಬ್ಬರಿಗೆ ವಂಚಿಸಿದ ಪ್ರಕರಣದಲ್ಲಿ ಬಂಧಿಸಲು ಬಂದು ಅವರಿಂದಲೇ ಲಂಚ ಪಡೆಯಲು ಮುಂದಾಗಿ ಸಿಕ್ಕಿಬಿದ್ದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಪ್ರಕರಣವೇನು?: ಬೆಂಗಳೂರಿನಲ್ಲಿ ನಡೆದ ಆನ್‌ಲೈನ್ ಹಣಕಾಸು ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಕೇರಳದ ಕೊಚ್ಚಿಯ ಮತ್ತಂಚೇರಿಯಲ್ಲಿ ಕರ್ನಾಟಕದ ಸೈಬರ್ ವಿಭಾಗದ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದರು. ಅವರನ್ನು ರಾಜ್ಯಕ್ಕೆ ಕರೆತರುವ ವೇಳೆ ಪ್ರಕರಣದಲ್ಲಿ ತಮ್ಮನ್ನು ಕೈಬಿಟ್ಟರೆ ಲಂಚ ನೀಡುವುದಾಗಿ ಆರೋಪಿಗಳು ಬೇಡಿಕೆ ಇಟ್ಟಿದ್ದರಂತೆ.
ಅದರಂತೆ ಓರ್ವ ಆರೋಪಿಯಿಂದ 3 ಲಕ್ಷ ಹಾಗೂ ಇನ್ನೊಬ್ಬನಿಂದ 1 ಲಕ್ಷ ರೂಪಾಯಿ ಲಂಚ ಪಡೆದಿದ್ದರು. ಆದರೂ ಸಹ ಆರೋಪಿಯನ್ನು ಬಿಡುಗಡೆ ಮಾಡದೇ ಇರುವುದಕ್ಕೆ ರೊಚ್ಚಿಗೆದ್ದ ಅವರ ಕುಟುಂಬಸ್ಥರು, ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದರು. ತಕ್ಷಣವೇ ಅಲರ್ಟ್ ಆದ ಕೊಚ್ಚಿಯ ಕಲಮಶ್ಶೇರಿ ಠಾಣಾ ಪೊಲೀಸರು, ಆರೋಪಿಗಳ ಕುಟುಂಬಸ್ಥರು ನೀಡಿದ ಮಾಹಿತಿಯಂತೆ ಬುಧವಾರ ರಾತ್ರಿ ವಾಹನ ತಡೆದು ವಶಕ್ಕೆ ಪಡೆದಿದ್ದಾರೆ.