ವಿಜಯಪುರ: ಕಾಂಗ್ರೆಸ್ ಸರ್ಕಾರ ರಚನೆಯಾದ ಮೇಲೆ ಶಾಸಕಾಂಗ ಸಭೆಯಲ್ಲಿ ಕೆಲ ಶಾಸಕರ ಅಸಮಾಧಾನ ಕುರಿತು ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ ಎಂದು ಜವಳಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.
ವಿಜಯಪುರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಕೆಲ ಸಚಿವರನ್ನು ದೆಹಲಿಗೆ ಕರೆದಿದ್ದಾರೆ. ಅವರಲ್ಲಿ ನಾನು ಹೋಗುತ್ತಿದ್ದೇನೆ. ಮಂತ್ರಿ ಮಂಡಲ ರಚನೆಯಾದ ಮೇಲೆ ಹೈಕಮಾಂಡ್ ಭೇಟಿಯಾಗಿಲ್ಲ. ಈ ಕಾರಣಕ್ಕೆ ದೆಹಲಿಗೆ ಹೋಗುತ್ತಿದ್ದೇವೆ ಅಷ್ಟೆ. ಬೆಂಗಳೂರಿಗೆ ರಾಹುಲ್ ಗಾಂಧಿ ಆಗಮಿಸಿದಾಗ ಅವರನ್ನು ಭೇಟಿಯಾಗಿಲ್ಲ. ಈ ಕಾರಣಕ್ಕಾಗಿ ನಾವು ದೆಹಲಿಗೆ ಹೋಗಿ ರಾಹುಲ್ ಗಾಂಧಿ ಸೇರಿದಂತೆ ಹಲವು ಹಿರಿಯ ಮುಖಂಡರನ್ನು ಭೇಟಿಯಾಗಲಿದ್ದೇವೆ. ದೆಹಲಿ ಪ್ರವಾಸಕ್ಕೂ ಆಳಂದ ಶಾಸಕ ಬಿ.ಆರ್ ಪಾಟೀಲ ಬರೆದ ಪತ್ರಕ್ಕೂ ಯಾವುದೇ ಸಂಬಂಧವಿಲ್ಲ” ಎಂದು ಸ್ಪಷ್ಟಪಡಿಸಿದರು.
“ಹೊಸದಾಗಿ ಸರ್ಕಾರ ರಚನೆಯಾದ ಮೇಲೆ ಆಡಳಿತ ಪಕ್ಷದ ಶಾಸಕರ ಮೇಲೆ ಹೆಚ್ಚು ಒತ್ತಡವಿರುತ್ತದೆ. ಅದರಲ್ಲಿಯೂ ಅಧಿಕಾರಿಗಳ ವರ್ಗಾವಣೆ ಬೇಡಿಕೆ ಇರುತ್ತದೆ. ಶೇ.6ರಷ್ಟು ಮಾತ್ರ ವರ್ಗಾವಣೆ ಮಾಡಬೇಕು ಎನ್ನುವ ನಿಯಮದ ಕಾರಣ ಹೆಚ್ಚು ವರ್ಗಾವಣೆ ಮಾಡಲಾಗುತ್ತಿಲ್ಲ. ಶಾಸಕಾಂಗ ಸಭೆಯಲ್ಲಿ ಯಾವುದೇ ಭಿನ್ನಾಭಿಪ್ರಾಯ ಉಂಟಾಗಿಲ್ಲ. ಆಂತರಿಕವಾಗಿ ಚರ್ಚೆ ನಡೆಸುತ್ತೇವೆ” ಎಂದರು.
ಸರ್ಕಾರ ಬೀಳಿಸುವ ಹುನ್ನಾರ ನಡೆದಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, “ಯಾವುದೇ ಕಾರಣಕ್ಕೂ ಇದು ಸಾಧ್ಯವಿಲ್ಲ. ನಾವು 136 ಶಾಸಕರು ಇದ್ದೇವೆ. ಹೇಗೆ ಬೀಳಿಸುತ್ತಾರೆ ಹೇಳಿ” ಎಂದು ಪ್ರಶ್ನಿಸಿದರು. ಇನ್ನು ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಮಾಜಿ ಪ್ರಧಾನಿ ದೇವೇಗೌಡರೇ ಹೇಳಿದ್ದಾರೆ. ಸುಮ್ಮನೆ ಉಹಾಪೋಹ ಬೇಡ ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು.
ಸಿಎಂಗೆ ಪತ್ರ ಬರೆದಿದ್ದ ಶಾಸಕರು: ಹಲವಾರು ಶಾಸಕರು ಅಸಮಾಧಾನಗೊಂಡು, ತಮ್ಮ ಕ್ಷೇತ್ರಗಳಲ್ಲಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಅವರು ವಿನಂತಿ ಮಾಡಿಕೊಂಡಂತೆ ಸರ್ಕಾರಿ ನೌಕರರ ವರ್ಗಾವಣೆಯನ್ನೂ ಮಾಡಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿ ಸಿಎಂಗೆ ಪತ್ರ ಬರೆದಿದ್ದರು. ಪಕ್ಷದ ಮೂಲಗಳ ಪ್ರಕಾರ, ಸಿಎಂಗೆ ಪತ್ರ ಬರೆದಿರುವ ಶಾಸಕರಲ್ಲೊಬ್ಬರಾದ ಪಾಟೀಲ್, ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದ ಸಚಿವರ ವಿರುದ್ಧ ಸಿಎಲ್‌ಪಿ ಸಭೆಯಲ್ಲಿ ವಾಗ್ದಾಳಿ ನಡೆಸಿದ್ದರು. ತಮಗೆ ಪತ್ರ ಬರೆಯುವ ಅಗತ್ಯವೇನಿತ್ತು ಎಂದು ಸಿದ್ದರಾಮಯ್ಯ ಅವರು ಪ್ರಶ್ನಿಸಿದಾಗ, ಪಾಟೀಲರು ತಮ್ಮ ಹಕ್ಕು ಪ್ರತಿಪಾದಿಸಿದ್ದರು ಎಂದು ತಿಳಿದು ಬಂದಿದೆ.