Breaking News

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ (ಬಿಎಂಟಿಸಿ) ಭಾರಿ ಗೋಲ್‌ಮಾಲ್

Spread the love

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ (ಬಿಎಂಟಿಸಿ) ಭಾರಿ ಗೋಲ್‌ಮಾಲ್ ನಡೆದಿದೆ ಎಂದು ವಿಲ್ಸನ್ ಗಾರ್ಡನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು, ನಿರ್ದೇಶಕರ ಸಹಿ ನಕಲಿಸಿ 76.57 ಲಕ್ಷ ರೂ ವಂಚನೆ ಮಾಡಲಾಗಿದೆ. ಗುತ್ತಿಗೆದಾರರೊಂದಿಗೆ ಅಧಿಕಾರಿಗಳೂ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ಬಿಎಂಟಿಸಿ ಸಹಾಯಕ ಭದ್ರತಾ ಜಾಗೃತಾಧಿಕಾರಿ ಸಿ.ಕೆ.ರಮ್ಯಾ ದೂರು ದಾಖಲಿಸಿದ್ದಾರೆ. ದೂರಿನನ್ವಯ ಬಿಎಂಟಿಸಿ ವಾಣಿಜ್ಯ ವಿಭಾಗದ ಮುಖ್ಯ ಸಂಚಾರಕ ಸೇರಿದಂತೆ 6 ಜನರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಮೂರು ವರ್ಷಗಳಿಂದ ನಿಗಮದ ಕೆಲ ಬಸ್ ನಿಲ್ದಾಣಗಳ ವಾಣಿಜ್ಯ ಸಂಕೀರ್ಣ, ಸ್ವಚ್ಛತಾ ನಿರ್ವಹಣೆ ಗುತ್ತಿಗೆ ಸೇರಿದಂತೆ ನಾಲ್ಕು ಟೆಂಡರ್​​ಗಳಲ್ಲಿ ಅಧಿಕಾರಿಗಳು ಗುತ್ತಿಗೆದಾರರ ಜೊತೆ ಸೇರಿ ಅವ್ಯವಹಾರ ನಡೆಸಿದ್ದಾರೆ. ದಾಖಲೆಗಳಲ್ಲಿ ಬಿಎಂಟಿಸಿ ಅಧಿಕಾರಿಗಳ ಸಹಿ ನಕಲು ಮಾಡಿ ಬಿಎಂಟಿಸಿ ನಿಗಮಕ್ಕೆ ಲಕ್ಷಾಂತರ ರೂಪಾಯಿ ವಂಚಿಸಿರುವುದು ಆಂತರಿಕ ತನಿಖೆಯಲ್ಲಿ ಪತ್ತೆಯಾಗಿದೆ.

ಬಿಎಂಟಿಸಿ ಬಸ್‌ ನಿಲ್ದಾಣಗಳ ಆವರಣದಲ್ಲಿ ಜಾಹೀರಾತಿಗೆ ಪರವಾನಗಿ, ಬ್ಯಾಂಕ್‌ ಎಟಿಎಂ ಘಟಕಗಳಿಗೆ ಪರವಾನಗಿ ಅವುಗಳ ಅವಧಿ ವಿಸ್ತರಣೆ, ಬಿಎಂಟಿಸಿಯ ಫ್ಲ್ಯಾಟ್‌ಗಳ ಹಂಚಿಕೆಗೆ ಸಂಬಂಧಪಟ್ಟ ಕಡತಗಳಿಗೆ ಸಂಸ್ಥೆಯ ಹಾಲಿ ವ್ಯವಸ್ಥಾಪಕ ನಿರ್ದೇಶಕಿ ಜಿ.ಸತ್ಯವತಿ, ಹಿಂದಿನ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಭದ್ರತೆ ಮತ್ತು ಜಾಗೃತ ದಳದ ನಿರ್ದೇಶಕರ ಹೆಸರಿನಲ್ಲಿ ನಕಲಿ ಸಹಿ ಮಾಡಿ ವಂಚಿಸಲಾಗಿದೆ. ಇದರಿಂದ ಸಂಸ್ಥೆಗೆ ಸಾಕಷ್ಟು ವಂಚನೆಯಾಗಿದೆ. ಸಂಸ್ಥೆಯ ಕೆಲವು ಅಧಿಕಾರಿಗಳ ಅಕ್ರಮ ಇಲಾಖಾ ತನಿಖೆಯಲ್ಲಿ ದೃಢಪಟ್ಟಿದೆ ಎಂದು ರಮ್ಯಾರವರು ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಬಿಎಂಟಿಸಿ ಮಾಹಿತಿ ಮತ್ತು ತಂತ್ರಜ್ಞಾನ ವಿಭಾಗದ ನಿರ್ದೇಶಕ ಸೂರ್ಯಸೇನ್, ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್, ರೇಜು, ಸಿ.ಶಿಖಾ, ಭದ್ರತಾ ಮತ್ತು ಜಾಗೃತಿ ವಿಭಾಗದ ನಿರ್ದೇಶಕ ಕೆ.ಅರುಣ ಅವರ ಸಹಿ ನಕಲು ಮಾಡಲಾಗಿದೆ. ವಾಣಿಜ್ಯ ವಿಭಾಗದ ಮುಖ್ಯ ಸಂಚಾರ ವ್ಯವಸ್ಥಾಪಕ ಶ್ರೀರಾಮ ಮುಲ್ಕಾವನ್, ವಿಭಾಗೀಯ ಸಂಚಾರ ಅಧಿಕಾರಿ ಶ್ಯಾಮಲಾ.ಎಸ್ ಮುದ್ದೋಡಿ, ಸಹಾಯಕ ಸಂಚಾರ ವ್ಯವಸ್ಥಾಪಕಿ ಬಿ.ಕೆ.ಮಮತ, ಸಹಾಯಕ ಸಂಚಾರ ಅಧೀಕ್ಷಕಿ ಟಿ.ಅನಿತಾ, ಸಂಚಾರ ನೀರೀಕ್ಷಕ ಸತೀಶ್, ಕಿರಿಯ ಸಹಾಯಕ ಪ್ರಕಾಶ್ ಕೊಪ್ಪಳ ವಿರುದ್ಧ ಆರೋಪಿಸಿ ಪ್ರಕರಣ ದಾಖಲಿಸಲಾಗಿದೆ.


Spread the love

About Laxminews 24x7

Check Also

ಪತಿಯನ್ನು ಕೊಲೆ ಮಾಡಲು ಸುಪಾರಿ ಕೊಟ್ಟಿದ್ದ ಪತ್ನಿ ಹಾಗೂ ಕೊಲೆ ಮಾಡಲು ಯತ್ನಿಸಿದ್ದ ಆರೋಪಿಗೆ ತಲಾ ಹತ್ತು ವರ್ಷ ಜೈಲು ಶಿಕ್ಷೆ

Spread the loveಕಾರವಾರ: ದಾಂಡೇಲಿ ಸಮೀಪದ ಅಂಬೇವಾಡಿ ಗಾಂವಠಾಣ ನಿವಾಸಿ ಅಂಕುಶ್​ ಸುತಾರ ಅವರ ಕೊಲೆಗೆ ಸುಪಾರಿ ಕೊಟ್ಟಿದ್ದ ಪ್ರಕರಣದಲ್ಲಿ ಅಂಕುಶ್​ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ