ಬೆಂಗಳೂರು : ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ವಿರುದ್ಧದ ತನಿಖೆಗೆ ಸಂಬಂಧಿಸಿದ ಕೇಸ್ ಡೈರಿಯನ್ನು ಆಗಸ್ಟ್ 2ರೊಳಗೆ ನ್ಯಾಯಾಲಯಕ್ಕೆ ಸಲ್ಲಿಸುವಂತೆ ಕೇಂದ್ರೀಯ ತನಿಖಾ ದಳ (ಸಿಬಿಐ)ಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.
ಆದಾಯ ಮೀರಿದ ಆಸ್ತಿ ಗಳಿಕೆ ಆರೋಪ ಸಂಬಂಧ ತಮ್ಮ ವಿರುದ್ಧ ಸಿಬಿಐ ದಾಖಲಿಸಿರುವ ಎಫ್‌ಐಆರ್ ಮತ್ತು ಆ ಕುರಿತ ತನಿಖೆ ರದ್ದುಪಡಿಸುವಂತೆ ಕೋರಿ ಶಿವಕುಮಾರ್ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಕೆ ನಟರಾಜನ್ ಅವರಿದ್ದ ನ್ಯಾಯಪೀಠ ವಿಚಾರಣೆಯನ್ನು ಪೂರ್ಣಗೊಳಿಸಿತು.
ವಿಚಾರಣೆ ವೇಳೆ ಸಿಬಿಐ ಪರ ವಕೀಲ ಪಿ ಪ್ರಸನ್ನ ಕುಮಾರ್, ಸಿಆರ್ಪಿಸಿ ಮತ್ತು ಸಿಬಿಐ ಕೈಪಿಡಿಯ ಪ್ರಕಾರ, ಕೇಸ್ ಡೈರಿಯನ್ನು ನ್ಯಾಯಾಲಯ ಸಮನ್ಸ್ ಮಾಡಲಾಗದು. ಆದರೆ, ನ್ಯಾಯಾಲಯ ಬಯಸಿದಲ್ಲಿ ವಿಶೇಷ ಅಧಿಕಾರ ಬಳಸಿ ಅದನ್ನು ಸಮನ್ಸ್ ಮಾಡಬಹುದು. ಎಫ್‌ಐಆರ್ ಪ್ರಶ್ನಿಸಿರುವ ಸಂದರ್ಭದಲ್ಲಿ ಕೇಸ್ ಡೈರಿಯನ್ನು ನೋಡುವಂತಿಲ್ಲ. ಅದಾಗ್ಯೂ, ನ್ಯಾಯಾಲಯ ಬಯಸಿದಲ್ಲಿ ಅದನ್ನು ಸಲ್ಲಿಸಲಾಗುವುದು ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ಶಿವಕುಮಾರ್ ಪರ ಹಿರಿಯ ವಕೀಲ ಸಂದೇಶ್ ಚೌಟ, ಶಿವಕುಮಾರ್ ಅವರ ವಿರುದ್ಧದ ಅಕ್ರಮ ಆಸ್ತಿಯ ಗಳಿಕೆ ಸಂಬಂಧಿಸಿದಂತೆ ಅಂಕಿ-ಸಂಖ್ಯೆಯಲ್ಲಿ ವ್ಯತ್ಯಾಸಗಳಿವೆ. ಹೀಗಾಗಿ, ಅದನ್ನು ತರಿಸಿಕೊಂಡು ನ್ಯಾಯಾಲಯ ಪರಿಶೀಲಿಸಬೇಕು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.