ಬೆಳಗಾವಿ: ಕುಂದಾನಗರಿಯಲ್ಲಿ ಕರಾಳ ದಿನಾಚರಣೆಗೆ ಮುಂದಾಗಿದ್ದ ಎಂಇಎಸ್ ಗೆ ಬೆಳಗಾವಿ ಜಿಲ್ಲಾಡಳಿತ ಬ್ರೇಕ್ ಹಾಕಿದ್ದರೂ, ಕೆಲ ಎಂಇಎಸ್ ಪುಂಡರು ಮತ್ತೆ ಕರಾಳ ದಿನ ಆಚರಿಸಲು ಮುಂದಾಗಿದ್ದಾರೆ.
ಬೆಳಗಾವಿಯ ಮರಾಠಾ ಭವನದಲ್ಲಿ ಸೇರಿರುವ ಎಂಇಎಸ್ ಕಾರ್ಯಕರ್ತರು ಪ್ರಚೋದನಕಾರಿ ಭಾಷಣಗಳನ್ನು ಮಾಡಿ, ಕರಾಳ ದಿನಾಚರಣೆ ನಡೆಸಲು ಮುಂದಾಗಿದ್ದಾರೆ. ಎಂಇಎಸ್ ಕಾರ್ಯಕರ್ತರಿಗೆ ಮಹಾರಾಷ್ಟ್ರದ ಸಚಿವರು ಕೂಡ ಸಾಥ್ ನೀಡಿದ್ದಾರೆ ಎನ್ನಲಾಗಿದೆ. ಕೈಗೆ ಕಪ್ಪು ಪಟ್ಟಿ ಧರಿಸಿ ಕಾರ್ಯಕರ್ತರು ಮರಾಠಾ ಭವನದಲ್ಲಿ ಸೇರಿದ್ದಾರೆ.
ಬೆಳಗಾವಿ, ಕಾರವಾರ, ನಿಪ್ಪಾಣಿ, ಬೀದರ್, ಭಾಲ್ಕಿ ಮಹಾರಾಷ್ಟ್ರಕ್ಕೆ ಸೇರಬೇಕೆಂದು ಘೋಷಣೆ ಕೂಗಿ ಉದ್ಧಟತನ ಪ್ರದರ್ಶಿಸಿದ್ದಾರೆ. ರಹೆಂಗೇ ತೋ ಮಹಾರಾಷ್ಟ್ರ ಮೇ, ನಹೀ ತೋ ಜೈಲ್ ಮೇ ಎಂದು ಘೋಷಣೆ ಕೂಗಿದ್ದಾರೆ.
ಎಂಇಎಸ್ ಕಾರ್ಯಕರ್ತರನ್ನು ತಡೆಯಲು ಪೊಲೀಸರು ಮುಂದಾಗಿದ್ದಾರೆ. ಈ ವೇಳೆ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ವಾಗ್ವಾದ, ಗಲಾಟೆ ಆರಂಭವಾಗಿದೆ. ಅಂತಿಮವಾಗಿ ಎಂಇಎಸ್ ಕಾರ್ಯಕರ್ತರನ್ನು ಪೊಲೀಸರು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.