ಬೀದರ್: ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಗ್ರಾಮವೊಂದರಲ್ಲಿ ಮನುಕುಲವೇ ತಲೆ ತಗ್ಗಿಸುವಂಥ ದುಷ್ಕೃತ್ಯ ಬೆಳಕಿಗೆ ಬಂದಿದೆ. ತನ್ನ ಅಪ್ರಾಪ್ತ ವಯಸ್ಸಿನ ಮಗಳ ಮೇಲೆ ತಂದೆಯೇ ಒಂದು ವರ್ಷದಿಂದ ನಿರಂತರ ಅತ್ಯಾಚಾರ ನಡೆಸಿರುವ ಘಟನೆ ನಡೆದಿದೆ.
ಬಸವಕಲ್ಯಾಣ ಪೊಲೀಸ್ ಠಾಣೆಯಲ್ಲಿ ಆರೋಪಿಯ ವಿರುದ್ಧ ಪ್ರಕರಣ ದಾಖಲಾಗಿದೆ.
ರಾತ್ರಿ ಹೊತ್ತಿನಲ್ಲಿ ಮನೆಯಲ್ಲಿ ಎಲ್ಲರೂ ಮಲಗಿದ್ದಾಗ ಆರೋಪಿ ಮಗಳ ಬಾಯಿ ಮುಚ್ಚಿ ನಿರಂತರವಾಗಿ ಅತ್ಯಾಚಾರ ಮಾಡುತ್ತಿದ್ದ. ಬಾಲಕಿ ಈ ವಿಷಯವನ್ನು ತನ್ನ ತಾಯಿಗೆ ತಿಳಿಸಿದ್ದು ಕೇಳಲು ಬಂದ ಪತ್ನಿಯನ್ನೇ ಥಳಿಸಿ ಗಲಾಟೆ ಮಾಡುತ್ತಿದ್ದನಂತೆ. ಘಟನೆಯ ನಂತರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಡೆಸಿದ ಆಪ್ತ ಸಮಾಲೋಚನೆಯಲ್ಲಿ ಬಾಲಕಿ ಸಂಗತಿಯನ್ನು ತೆರೆದಿಟ್ಟಿದ್ದಾಳೆ. ನಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ: ಭಿಕ್ಷೆ ಬೇಡುತ್ತಿದ್ದ ಬಾಲಕಿ ಮೇಲೆ ದೇವಾಲಯದ ಆಡಳಿತ ಸಿಬ್ಬಂದಿಯೇ ದೇವಾಲಯದ ಆವರಣದಲ್ಲಿಯೇ ಸಾಮೂಹಿಕ ಅತ್ಯಾಚಾರ ನಡೆಸಿದ್ದ ಘಟನೆ ಇತ್ತೀಚೆಗೆ ಮಧ್ಯಪ್ರದೇಶದ ಭೋಪಾಲ್ನಲ್ಲಿ ನಡೆದಿತ್ತು. ಮೈಹಾರ್ ದೇವಾಲಯದ ಆಡಳಿತ ಸಮಿತಿಯ ಇಬ್ಬರು ನೌಕರರು ಬಾಲಕಿಗೆ ಆಮಿಷವೊಡ್ಡಿ ಪ್ರತ್ಯೇಕ ಸ್ಥಳಕ್ಕೆ ಕೊಂಡೊಯ್ದು ಅತ್ಯಾಚಾರ ನಡೆಸಿದ್ದರು. ಗುರುವಾರ ಅತ್ಯಾಚಾರ ನಡೆದಿದ್ದು, ಮರುದಿನ ಬೆಳಕಿಗೆ ಬಂದಿದೆ. ತೀವ್ರ ರಕ್ತಸ್ರಾವದಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಬಾಲಕಿಯನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬಾಲಕಿಯನ್ನು ರೇವಾದಲ್ಲಿರುವ ಸಂಜಯ್ ಗಾಂಧಿ ಸ್ಮಾರಕ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆರೋಪಿಗಳನ್ನು ರವಿ ಚೌಧರಿ ಹಾಗೂ ಅತುಲ್ ಬಧೋಲಿಯಾ ಎಂದು ಗುರುತಿಸಲಾಗಿದ್ದು, ಇಬ್ಬರನ್ನೂ ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನಂತರದ ಬೆಳವಣಿಗೆಯಾಗಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ ಸೇರಿ ಅತ್ಯಾಚಾರ ಆರೋಪಿಗಳಿಬ್ಬರ ಮನೆಗಳನ್ನು ಬುಲ್ಡೋಜರ್ನಿಂದ ಕೆಡವಿದ್ದರು.