ಕೆಂಪುಚಿನ್ನ ಟೊಮೆಟೊಗೆ ನಿಜಕ್ಕೂ ಚಿನ್ನದ ಬೆಲೆ ಬಂದು ಬಿಟ್ಟಿದೆ. ನಾಲ್ಕು ಎಕರೆಯಲ್ಲಿ ಟೊಮೆಟೊ ಬೆಳೆದ ರೈತನೋರ್ವ ಕಳೆದ ಒಂದೂವರೆ ತಿಂಗಳಿನಲ್ಲಿ 50 ಲಕ್ಷಕ್ಕೂ ಅಧಿಕ ಆದಾಯ ಗಳಿಸಿದ್ದಾನೆ. ದ್ರಾಕ್ಷಿ ಬೆಳೆದು, ಕಬ್ಬು ಬೆಳೆದು ನಷ್ಟದಲ್ಲಿದ್ದ ಅನ್ನದಾತನಿಗೆ ಟೊಮೆಟೊ ಕೈ ಹಿಡಿದಿದ್ದು, ಅರ್ಧಕೋಟಿ ಒಡೆಯನಾಗಿದ್ದಾನೆ. ಟೊಮೆಟೊ ಬೆಳೆದು ಸಿರಿವಂತನಾದ ರೈತನ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ…
ಕೆಂಗುಲಾಬಿಯಂತೆ ಹೊಳೆಯುವ ಟೊಮೆಟೊ ಹಣ್ಣಿಗೆ ಇದೀಗ ಚಿನ್ನದ ಬೆಲೆ ಬಂದಿದೆ. ಹೀಗಾಗಿಯೇ ಟೊಮೆಟೊ ಬೆಳೆದವರು ಉತ್ತಮ ಲಾಭ ಮಾಡಿಕೊಳ್ತಿದ್ದು, ಶ್ರೀಮಂತರಾಗುತ್ತಿದ್ದಾರೆ. ಅದರಂತೆ ವಿಜಯಪುರ ತಾಲೂಕಿನ ಅಲಿಯಾಬಾದ ತಾಂಡಾ ನಿವಾಸಿ ಭೀಮು ಭಾವಸಿಂಗ್ ಲಮಾಣಿ ಎಂಬುವವರು ತಮ್ಮ ಜಮೀನಿನಲ್ಲಿ ನಾಲ್ಕು ಎಕರೆ ಟೊಮೆಟೊ ಬೆಳೆದಿದ್ದಾರೆ. ನಾಲ್ಕು ಎಕರೆ ಟೊಮೆಟೊಗೆ ಕಳೆದ ಒಂದೂವರೆ ತಿಂಗಳಿನಲ್ಲಿ ಬರೋಬ್ಬರಿ 50 ಲಕ್ಷಕ್ಕೂ ಅಧಿಕ ಲಾಭ ಗಳಿಸಿದ್ದಾರೆ. ನಿತ್ಯ 100 ರಿಂದ 150 ಟ್ರೇ ವರೆಗೆ ವಿಜಯಪುರದ ಎಪಿಎಂಸಿ ಗೆ ಟೊಮೆಟೊ ಕಳಿಸಿ ಮಾರಾಟ ಮಾಡುವ ಇವರು ಲಕ್ಷ ಲಕ್ಷ ಆದಾಯ ಗಳಿಸಿದ್ದಾರೆ. 25 ಕೆಜಿ ತೂಕದ ಒಂದೊಂದು ಟ್ರೇಗೆ ಆರಂಭದಲ್ಲಿ 800 ರಿಂದ 1 ಸಾವಿರ ರೂಪಾಯಿ ವರೆಗೆ ಬೆಲೆ ಸಿಕ್ಕಿದೆ. ಆದ್ರೆ ಈ ಜುಲೈ ತಿಂಗಳಿನಲ್ಲಿ ಒಂದೊಂದು ಟ್ರೇ ಗಳು 2500 ರಿಂದ 3 ಸಾವಿರ ರೂಪಾಯಿಗೆ ಮಾರಾಟ ಆಗ್ತಿವೆ. ಹೀಗಾಗಿ ಉತ್ತಮ ಲಾಭವನ್ನು ರೈತ ಮಾಡಿಕೊಳ್ತಿದ್ದಾರೆ…