ಕಲಬುರಗಿ: ಬಸ್ ನಿಲ್ದಾಣದಲ್ಲಿ ನಿಂತಿದ್ದ ಸಾರಿಗೆ ಬಸ್ ಹತ್ತಲು ಶಾಲಾ ವಿದ್ಯಾರ್ಥಿನಿಯರಿಗೆ ಅಡ್ಡಿಪಡಿಸಿದ್ದಲ್ಲದೇ, ಬುರ್ಖಾ ಧರಿಸಿ ಮಾತನಾಡು ಎಂದು ಹೇಳಿ ಅನುಚಿತವಾಗಿ ವರ್ತನೆ ತೋರಿದ್ದಾರೆ ಎಂಬ ಆರೋಪ ಕೇಳಿಬಂದ ಹಿನ್ನೆಲೆ ಬಸ್ ಚಾಲಕನನ್ನು ಅಮಾನತು ಮಾಡಲಾಗಿದೆ.
ಕಲಬುರಗಿ ಬಸ್ ಡಿಪೋ 3 ರ ಚಾಲಕ ಮೆಹಬೂಬ್ ಪಟೇಲ್ ಅಮಾನತುಗೊಂಡ ಚಾಲಕ. ಜುಲೈ 26ರಂದು ಬಸವಕಲ್ಯಾಣ – ಕಲಬುರಗಿ ಮಧ್ಯೆ ಸಂಚರಿಸುವ ಬಸ್ ಕಮಲಾಪುರ ನಿಲ್ದಾಣದಲ್ಲಿ ನಿಂತಾಗ ಕಮಲಾಪುರದಿಂದ ಓಕಳಿ ಗ್ರಾಮಕ್ಕೆ ಹೋಗಲು ಬಸ್ ಹತ್ತುತ್ತಿದ್ದ ವಿದ್ಯಾರ್ಥಿನಿಯರ ಜೊತೆ ಚಾಲಕ ದರ್ಪದಿಂದ ವರ್ತಿಸಿದ್ದ ಆರೋಪ ಕೇಳಿ ಬಂದಿದೆ. ಇದೇ ವೇಳೆ, ಹಿಜಾಬ್ ಧರಿಸಿದ್ದ ವಿದ್ಯಾರ್ಥಿನಿಯರಿಗೆ ಬುರ್ಖಾ ಧರಿಸಿ ಮಾತನಾಡು ಎಂದು ಚಾಲಕ ಹೇಳಿದ್ದ ಎಂದು ವಿದ್ಯಾರ್ಥಿನಿಯರು ಆರೋಪಿಸಿರುವ ವಿಡಿಯೋ ವೈರಲ್ ಆಗಿತ್ತು. ಅಲ್ಲದೇ, ಇದೇ ವಿಚಾರವಾಗಿ ಶಿಕ್ಷಕರು ಮತ್ತು ಬಸ್ ಚಾಲಕನ ಮಧ್ಯೆ ಮಾತಿನ ಚಕಮಕಿ ನಡೆದಿತ್ತು. ಇದೀಗ ಪ್ರಯಾಣಿಕರೊಂದಿಗೆ ಅಸಭ್ಯ ವರ್ತನೆ ತೋರಿದ ಆರೋಪದ ಮೇಲೆ ಚಾಲಕನನ್ನು ಅಮಾನತು ಮಾಡಲಾಗಿದೆ ಎಂದು ಕೆಕೆಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಎಂ ರಾಚಪ್ಪ ದೃಢಪಡಿಸಿದ್ದಾರೆ.
ಚಾಲಕ ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ನಡೆದುಕೊಂಡಿದ್ದರು ಎಂಬ ಆರೋಪ ಇದೆ. ಶಿಕ್ಷಕರು ಮತ್ತು ಚಾಲಕನ ನಡುವೆ ನಡೆದ ವಾಗ್ವಾದದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಕೂಡ ಆಗಿತ್ತು. ಅಲ್ಲದೇ, ವಿಡಿಯೋಗೆ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಚಾಲಕ ಮೆಹಬೂಬ್ ಪಟೇಲ್ ವಿರುದ್ದ ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಚಾಲಕನನ್ನು ಕೆಕೆಆರ್ಟಿಸಿ ಕಲಬುರಗಿ ವಿಭಾಗದ ಡಿಸಿ ಅಮಾನತು ಮಾಡಿದ್ದಾರೆ.
Laxmi News 24×7