ಬೆಳಗಾವಿ : ನಗರದ ಉದ್ಯಮಬಾಗ ಪೊಲೀಸರು ವ್ಯಕ್ತಿಯೊಬ್ಬನಿಗೆ ಥಳಿಸಿರುವ ಕುರಿತು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.
ಅದರಲ್ಲಿ ವಿಕಲಚೇತನ ವ್ಯಕ್ತಿಗೆ ಮನಬಂದಂತೆ ಪೊಲೀಸರು ಹೊಡೆದಿರುವುದು, ಸದ್ಯ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ನಿರಂಜನ ಚೌಗುಲೆ ವಿಕಲಚೇತನ ವ್ಯಕ್ತಿ ಪೊಲೀಸರಿಂದ ಹಲ್ಲೆಗೆ ಒಳಗಾಗಿದ್ದೇನೆ ಎಂದು ಅಳಲು ತೋಡಿಕೊಂಡಿದ್ದಾರೆ. ಘಟನೆ ಕುರಿತು ಇಂದು ಮಾಧ್ಯಮಗಳ ಜೊತೆಗೆ ಮಾತನಾಡಿರುವ ನಿರಂಜನ್, ನಾನು ಊಟವನ್ನು ಪಾರ್ಸಲ್ ತೆಗೆದುಕೊಳ್ಳಲು ಹೊಟೇಲ್‌ಗೆ ಹೋಗಿದ್ದೆ. ಊಟ ಕಟ್ಟಿಸಿಕೊಂಡು ಹೊರಡುವಾಗ ಪೊಲೀಸರು ಬಂದು ತಡೆದರು. ಇಷ್ಟೊತ್ತಿನಲ್ಲಿ ಇಲ್ಲಿ ಯಾಕೆ ನಿಂತಿದ್ದಿಯಾ..? ಎಂದು ಪ್ರಶ್ನಿಸಿ ಏಕಾಏಕಿ ಹಲ್ಲೆ ಮಾಡಲು ಶುರು ಮಾಡಿದರು ಎಂದು ಆರೋಪಿಸಿದ್ದಾರೆ.
ನಾನು ಅಂಗವಿಕಲ, ಸರಿಯಾಗಿ ನಡೆಯಲು ಬರಲ್ಲ. ದಯವಿಟ್ಟು ಬಿಟ್ಟು ಬಿಡಿ ಎಂದು ಎಷ್ಟೇ ಅಂಗಲಾಚಿದರೂ ಬಿಡದ ಪೊಲೀಸರು ಸುರಿಯುವ ಮಳೆಯಲ್ಲಿ ನೆಲಕ್ಕೆ ಕೆಡವಿ ಹೊಡೆದಿದ್ದಾರೆ. ಹೊಡೆದು ಮೊಬೈಲ್, ಬೈಕ್ ಕಸಿದುಕೊಂಡು ಹೋದರು. ರಾತ್ರಿ ನಡೆಯಲಾಗದೇ ಬೀದಿಯಲ್ಲಿ ಮಲಗಿ, ಬೆಳಗ್ಗೆ ಎದ್ದು ಮನೆಗೆ ಹೋಗಿದ್ದೇನೆ ಎಂದು ಆರೋಪಿಸುತ್ತಾ ಘಟನೆ ಬಗ್ಗೆ ವಿವರಿಸಿದರು.