ಬೆಂಗಳೂರು : “ರಾಜಕಾರಣದಲ್ಲಿ ಎಲ್ಲರೂ ಸಮಾನರು, ಯಾವ ಅಸಮಾಧಾನವೂ ಇಲ್ಲ. ಯಾವ ಸಮುದಾಯವನ್ನೂ ತುಳಿಯುವ ಕೆಲಸವನ್ನು ಕಾಂಗ್ರೆಸ್ ಪಕ್ಷ ಎಂದಿಗೂ ಮಾಡುವುದಿಲ್ಲ. ಬಿ.ಕೆ.ಹರಿಪ್ರಸಾದ್ ಅವರು ಏನು ಹೇಳಿದ್ದಾರೆ ಎಂಬುದು ನನಗೆ ಸರಿಯಾಗಿ ಗೊತ್ತಿಲ್ಲ. ಹೀಗಾಗಿ, ಆ ಬಗ್ಗೆ ನಾನು ಮಾತನಾಡಲು ಹೋಗುವುದಿಲ್ಲ. ಆ ಬಗ್ಗೆ ವಿಚಾರಿಸಿ ಮಾತನಾಡುತ್ತೇನೆ” ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ನಗರದಲ್ಲಿ ಶನಿವಾರ ಮಾಧ್ಯಮಗಳೊಂದಿಗೆ ಸಚಿವರು ಮಾತನಾಡಿದರು. ಇದೇ ವೇಳೆ ಹಾಲಿನ ಬೆಲೆ ಏರಿಕೆ ಕುರಿತಾದ ಪ್ರಶ್ನೆಗೆ ಉತ್ತರಿಸಿ, “ನಾನು ರೈತನ ಮಗ, ಪಶು ಆಹಾರ, ಹಾಲಿನ ಉತ್ಪಾದನಾ ವೆಚ್ಚ ಜಾಸ್ತಿಯಾಗಿದೆ. ಹೀಗಾಗಿ, 5 ರೂಪಾಯಿ ಹೆಚ್ಚಳ ಮಾಡಬೇಕು ಎಂದು ನಾನೇ ದೊಡ್ಡಬಳ್ಳಾಪುರದಲ್ಲಿ ಭಾಷಣ ಮಾಡಿದ್ದೆ. ಹಾಲು ಒಕ್ಕೂಟದವರು ಸಹ ಪ್ರಸ್ತಾಪ ಮಾಡಿದ್ದರು. ಈ ಕುರಿತು ಚರ್ಚಿಸಿ 3 ರೂಪಾಯಿ ಹೆಚ್ಚಳ ಮಾಡಲಾಗಿದೆ. ಹೆಚ್ಚಿನ ಹಣ ರೈತರಿಗೆ ಸೇರಬೇಕು. ಈಗಲೂ ಸಹ ನಷ್ಟವಾಗುತ್ತಿದೆ. ಆದರೂ ಸರಿದೂಗಿಸಿಕೊಂಡು ಹೋಗಬೇಕಲ್ಲ?. ಬೆಲೆ ಹೆಚ್ಚಳ ಎಂದು ಬಿಜೆಪಿಯವರು ಟೀಕೆ ಮಾಡಲಿ, ಅವರು ಇರುವುದೇ ಟೀಕೆ ಮಾಡೋಕೆ” ಎಂದರು.