ಹುಬ್ಬಳ್ಳಿ: ಸಾರ್ವಜನಿಕರಿಗೆ ಗುಣಮಟ್ಟದ ಸಾರಿಗೆ ಸೇವೆ ಜೊತೆಗೆ ಸುರಕ್ಷಿತ ಪ್ರಯಾಣದ ಸೇವೆಯನ್ನು ಒದಗಿಸುತ್ತಿರುವ ನೈಋತ್ಯ ರೈಲ್ವೆ ಇಲಾಖೆ ಈಗ ಮತ್ತೊಂದು ಮಹತ್ವದ ಕಾರ್ಯಕ್ಕೆ ಮುಂದಾಗಿದೆ.
ಪ್ರಯಾಣಿಕರ ಆರ್ಥಿಕ ಹೊರೆಯನ್ನು ತಗ್ಗಿಸುವ ಮೂಲಕ ಕಡಿಮೆ ದರದಲ್ಲಿಯೇ ಗುಣಮಟ್ಟದ ಆಹಾರ ನೀಡುವ ಕಾರ್ಯವನ್ನು ಕೈಗೆತ್ತಿಕೊಂಡಿದೆ.
ವಿಶ್ವದ ಅತಿದೊಡ್ಡ ರೈಲ್ವೆ ಫ್ಲಾಟ್ ಫಾರಂ ಎಂಬ ಹೆಗ್ಗಳಿಕೆ ಪಾತ್ರವಾಗಿರುವ ಜೊತೆಗೆ ಸಾಕಷ್ಟು ಜನಪರ ಕಾರ್ಯವನ್ನು ಮಾಡಿರುವ ನೈಋತ್ಯ ರೈಲ್ವೆ ವಲಯವು, ಈಗ ಪ್ರಯಾಣಿಕರಿಗೆ ಕಡಿಮೆ ದರದಲ್ಲಿಯೇ ಗುಣಮಟ್ಟದ ಆಹಾರ ಪದಾರ್ಥಗಳನ್ನು ನೀಡುತ್ತಿದೆ. ಐ.ಆರ್.ಸಿ.ಟಿ.ಸಿ ಹಾಗೂ ಎಸ್.ಡಬ್ಲ್ಯೂ. ಆರ್ ಸಹಯೋಗದೊಂದಿಗೆ ರೈಲ್ವೆ ಫ್ಲಾಟ್ ಫಾರಂ ಮೇಲೆ ಜನತಾ ಖಾನಾ ಹಾಗೂ ಸ್ನ್ಯಾಕ್ ಮೀಲ್ಸ್ ಹೆಸರಲ್ಲಿ ಪ್ರಯಾಣಿಕರಿಗೆ ಕಡಿಮೆ ದರದಲ್ಲಿ ಗುಣಮಟ್ಟದ ಆಹಾರ ಒದಗಿಸುತ್ತಿದೆ. ಈಗಾಗಲೇ ಹುಬ್ಬಳ್ಳಿಯ ಸಿದ್ಧಾರೂಢ ಸ್ವಾಮೀಜಿ ರೈಲ್ವೆ ನಿಲ್ದಾಣ ಹಾಗೂ ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ನಿಲ್ದಾಣದಲ್ಲಿ ವಿದ್ಯುಕ್ತವಾಗಿ ಚಾಲನೆ ನೀಡಲಾಗಿದೆ.
ಇನ್ನು ಕಡಿಮೆ ದರದಲ್ಲಿಯೇ ಗುಣಮಟ್ಟದ ಸಾರಿಗೆ ಸೇವೆಯ ಜೊತೆಗೆ ಆರೋಗ್ಯಯುತ ಆಹಾರ ನೀಡುವ ನಿಟ್ಟಿನಲ್ಲಿ ರೈಲ್ವೆ ಪ್ರಯಾಣಿಕರಿಗೆ 20 ರೂಪಾಯಿಯಲ್ಲಿ ಜನತಾ ಖಾನಾ, 50 ರೂಪಾಯಿಯಲ್ಲಿ ಸ್ಕ್ಯಾಕ್ ಮೀಲ್ಸ್ ನೀಡುವುದರ ಮೂಲಕ ಪ್ರಯಾಣಿಕರ ಹಸಿವನ್ನು ನೀಗಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಅನ್ ರಿಸರ್ವಡ್ ಪ್ಯಾಸೆಂಜರ್ಗೆ ಈ ಯೋಜನೆ ಲಾಭ ದೊರೆಯಲಿದ್ದು, ಕಡಿಮೆ ದರದಲ್ಲಿ ಗುಣಮಟ್ಟದ ಆಹಾರ ನೀಡುವ ಮೂಲಕ ಎಸ್.ಡಬ್ಲೂ.ಆರ್ ವಲಯದ 51 ರೈಲ್ವೆ ನಿಲ್ದಾಣದಲ್ಲಿರುವ ಸ್ಟಾಲ್ ಮೂಲಕ ವಿತರಣೆ ಮಾಡಲಾಗುತ್ತಿದೆ. ರೈಲ್ವೆ ಇಲಾಖೆ ಒಂದಿಲ್ಲೊಂದು ರೀತಿಯಲ್ಲಿ ಸಾರ್ವಜನಿಕರ ಸೇವೆಗೆ ಮುಂದಾಗುತ್ತಿರುವುದು ವಿಶೇಷವಾಗಿದೆ. ಈ ನಿಟ್ಟಿನಲ್ಲಿ ಸ್ವಚ್ಛತೆಗೆ ಹಾಗೂ ಗುಣಮಟಕ್ಕೆ ನೈಋತ್ಯ ರೈಲ್ವೆ ಇಲಾಖೆ ಹಾಗೂ ಐ.ಆರ್.ಸಿ.ಟಿ.ಸಿ ಆದ್ಯತೆ ನೀಡಬೇಕಿದೆ ಎನ್ನುವುದು ಸಾರ್ವಜನಿಕರ ಅಭಿಪ್ರಾಯ.