ಬೆಂಗಳೂರು : ನಗರದ ಪ್ರತಿಷ್ಠಿತ ಹೋಟೆಲ್ ಕ್ಯಾಶಿಯರ್ನನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಇಲ್ಲಿನ ಜೀವನ್ ಭೀಮಾನಗರ ಮುರುಗೇಶ್ ಪಾಳ್ಯದಲ್ಲಿ ನಡೆದಿದೆ.
ಖಾಸಗಿ ಹೋಟೆಲ್ ಅಂಡ್ ಸರ್ವಿಸ್ ಅಪಾರ್ಟ್‌ಮೆಂಟಿನ ಕ್ಯಾಶಿಯರ್ ಸುಭಾಷ್ ಕೊಲೆಯಾದವರು ಎಂದು ಗುರುತಿಸಲಾಗಿದೆ. ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದ ಅಭಿಷೇಕ್ ಎಂಬಾತನಿಂದ ಕೃತ್ಯ ನಡೆದಿದ್ದು, ಘಟನೆ ಬಳಿಕ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ.
ಸುಭಾಷ್ ವಾಸವಿದ್ದ ರೂಮಿನಲ್ಲಿ ಸೋಫಾ ಮೇಲೆ ಮಲಗಿದ್ದಾಗ ಆತನಿಗೆ ಚಾಕುವಿನಿಂದ ಇರಿದು ಹತ್ಯೆಗೈಯಲಾಗಿದೆ. ಬೆಳಗ್ಗೆ 6:30ರ ಸುಮಾರಿಗೆ ನವೀನ್ ಎಂಬುವವರು ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ತಕ್ಷಣ ಎಸಿಪಿ ರಾಮಚಂದ್ರ ಹಾಗೂ ಇನ್ಸ್‌ಪೆಕ್ಟರ್ ರಾಜಣ್ಣ ನೇತೃತ್ವದ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸದಾಗ ಕೊಲೆಗೈದ ನಂತರ ಕ್ಯಾಶ್ ಡ್ರಾಯರ್ನಲ್ಲಿದ್ದ ಸ್ವಲ್ಪ ಹಣವನ್ನ ತೆಗೆದುಕೊಂಡು, ಸಿಸಿಟಿವಿ ಕ್ಯಾಮರಾಗೆ ಹಾನಿಪಡಿಸಿ ಆರೋಪಿ ಪರಾರಿಯಾಗಿರುವುದು ಪತ್ತೆಯಾಗಿದೆ.
ಇನ್ನು, ಈ ಪ್ರಕರಣ ಸಂಬಂಧ ಪೂರ್ವ ವಿಭಾಗದ ಡಿಸಿಪಿ ಡಾ. ಭೀಮಾಶಂಕರ ಗುಳೇದ್ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಬೆಳಗ್ಗೆ ನವೀನ್ ಎಂಬುವವರು ಬಂದು ನಮ್ಮ ಹೋಟೆಲ್ನಲ್ಲಿ ಕ್ಯಾಶಿಯರ್ ಯಾರೋ ಕೊಲೆ ಮಾಡಿದ್ದಾರೆ ಎಂದು ಮಾಹಿತಿ ನೀಡಿದರು. ಬಳಿಕ ನಮ್ಮ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮೇಲ್ನೋಟಕ್ಕೆ ದರೋಡೆಗಾಗಿ ಹತ್ಯೆ ನಡೆದಿರುವಂತೆ ಕಂಡು ಬರುತ್ತದೆ.
ಜೀವನ್ ಭೀಮಾನಗರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಿಸಿಲಾಗಿದ್ದು, ಪ್ರಾಥಮಿಕ ತನಿಖೆಯಲ್ಲಿ ಹೋಟೆಲ್ನಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದ ಅಭಿಷೇಕ್ ಕೊಲೆ ಮಾಡಿರುವುದು ಎಂದು ತಿಳಿದು ಬಂದಿದೆ. ಸದ್ಯ ತಲೆಮರೆಸಿಕೊಂಡಿರುವ ಆರೋಪಿ ಬಂಧನಕ್ಕೆ ವಿಶೇಷ ತಂಡವನ್ನು ರಚನೆ ಮಾಡಲಾಗಿದೆ. ಅದಷ್ಟು ಬೇಗ ಆರೋಪಿಯನ್ನು ಬಂಧಿಸುವುದಾಗಿ ತಿಳಿಸಿದರು.