ಶಿವಮೊಗ್ಗ: ಜಿಲ್ಲೆಯ ಸಾಗರ ತಾಲೂಕಿನಲ್ಲಿ ಮನ ಕಲುಕುವ ಘಟನೆ ನಡೆದಿದೆ. ಸಾಗರದ ಖಾಸಗಿ ಶಾಲೆಯಲ್ಲಿ ಒಂದನೇ ತರಗತಿಯ ವಿದ್ಯಾರ್ಥಿ ಕಲು ಷಿತ ನೀರು ಇರುವ ಪ್ಲಾಸ್ಟಿಕ್ ಡ್ರಮ್ನಲ್ಲಿ ಬಿದ್ದು ಈಗ ಆಸ್ಪತ್ರೆಯಲ್ಲಿ ಜೀವನ್ಮರಣದ ಹೋರಾಟ ನಡೆಸುತ್ತಿದ್ದಾನೆ ಎಂದು ಆರೋಪಿಸಲಾಗಿದೆ. ಸಾಗರ ಪಟ್ಟಣದ ಶಿವಮೊಗ್ಗ ರಸ್ತೆಯಲ್ಲಿರುವ ಶಾಲೆಯ ಶಿಕ್ಷಕರ ನಿರ್ಲಕ್ಷ್ಯ ಈ ಘಟನೆ ನಡೆದಿದೆ ಎಂದು ಬಾಲಕನ ಪೋಷಕರು ಆರೋಪಿಸುತ್ತಿದ್ದಾರೆ. ಈಗ ಬಾಲಕನನ್ನು ಮಣಿಪಾಲದ ಕಸ್ತೂರ್ ಬಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ಹಿನ್ನಲೆ: ಜೂ.26 ರಂದು ಸಾಗರದ ಕೆಳದಿ ರಸ್ತೆಯ ನಿವಾಸಿಯಾಗಿರುವ ಇಬ್ರಾಹಿಂ ಕೊಯಾ ಅವರ ಆರು ವರ್ಷದ ಮಗು ಎಂದಿನಂತೆ ಶಾಲೆಗೆ ಹೋಗಿದೆ. ಶಾಲೆಯಲ್ಲಿ ಮಧ್ಯಾಹ್ನದ ಸುಮಾರಿಗೆ ಶೌಚಾಲಯ ಬಳಿ ಇರುವ ಕುಲಷಿತ ನೀರಿರುವ ಪ್ಲಾಸ್ಟಿಕ್ ಡ್ರಮ್ಗೆ ಆಕಸ್ಮಿಕವಾಗಿ ಬಿದ್ದಿರುವ ಘಟನೆ ನಡೆದಿತ್ತು. ಅಲ್ಲಿ ಇದ್ದ ವಿದ್ಯಾರ್ಥಿಗಳು ತಕ್ಷಣ ಶಿಕ್ಷಕರಿಗೆ ಮಾಹಿತಿ ನೀಡಿದ್ದರು, ಶಿಕ್ಷಕರು ತಕ್ಷಣ ಬಾಲಕನನ್ನು ಡ್ರಮ್ನಿಂದ ಮೇಲಕ್ಕೆತ್ತಿ ಶಾಲಾ ಕೊಠಡಿಗೆ ಕರೆದುಕೊಂಡು ಹೋಗಿದ್ದರು. ಆದರೆ, ಶಿಕ್ಷಕರು ಮಗುವಿಗೆ ಯಾವುದೇ ರೀತಿಯ ಚಿಕಿತ್ಸೆ ಕೊಡಿಸದೇ, ಬಾಲಕನನ್ನು ಶಾಲೆಯಲ್ಲಿಯೇ ಕೂರಿಸಿ ನಂತರ ಸಂಜೆಗೆ ಮನೆಗೆ ಕಳುಹಿಸಿಕೊಟ್ಟಿದ್ದರು ಎಂದು ಪೋಷಕರು ಆರೋಪಿಸಿದ್ದಾರೆ.
ಬಾಲಕ ಮನೆಗೆ ಹೋದ ಸಂದರ್ಭದಲ್ಲಿ ತೀವ್ರ ಜ್ವರ ಕಾಣಿಸಿಕೊಂಡಿತ್ತು. ತಕ್ಷಣ ಪೋಷಕರು ಮಗುವನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದರು. ನಂತರ ಬಾಲಕನಿಗೆ ಇನ್ಫೆಕ್ಷನ್ ಆಗಿದೆ ಸ್ಕ್ಯಾನಿಂಗ್ ಮಾಡಬೇಕು ಎಂದು ವೈದ್ಯರು ತಿಳಿಸಿದ್ದರು. ಪೋಷಕರು ಮಗುವಿನ ಸ್ಕ್ಯಾನಿಂಗ್ ಮಾಡಿಸಿದ ಸಂದರ್ಭದಲ್ಲಿ ಬಾಲಕನ ಹೊಟ್ಟೆಯಲ್ಲಿ ಕುಲಷಿತ ನೀರು ಸಂಗ್ರಹವಾಗಿರುವುದು ಕಂಡು ಬಂದಿದೆಯಂತೆ. ವೈದ್ಯರ ಸಲಹೆ ಮೇರೆಗೆ ತಕ್ಷಣ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಸರ್ಜಿ ಮಕ್ಕಳ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ನಂತರ ಅಲ್ಲಿಂದ ಮಣಿಪಾಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಮಣಿಪಾಲ್ ಆಸ್ಪತ್ರೆಯಲ್ಲಿ ಬಾಲಕನ ದೇಹದಿಂದ ಪೈಪ್ ಮೂಲಕ ನೀರನ್ನು ಹೊರಕ್ಕೆ ತೆಗೆದಿದ್ದಾರೆ. ಆದರೂ ಸಹ ಬಾಲಕನ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೋಷಕರು ಹೇಳುತ್ತಿದ್ದಾರೆ.