ಹಾಸನ: ಹೆಚ್ಚಿನ ಹಫ್ತಾ ಹಣ ಕೊಡಲಿಲ್ಲ ಅಂತ ಪುಡಿರೌಡಿಯೊಬ್ಬ ಅಂಗಡಿ ಮಾಲೀಕನಿಗೆ ಮನಸೋ ಇಚ್ಛೆ ಹಲ್ಲೆ ಮಾಡಿರುವ ಘಟನೆ ಹಾಸನದ ಸಿದ್ದಯ್ಯ ನಗರದಲ್ಲಿ ನಡೆದಿದೆ.
ಸೂರ್ಯಪ್ರಭ (54) ಹಲ್ಲೆಗೊಳಗಾದ ಪ್ರಭಾ ಆಟೋಮೋಟಿವ್ ಶಾಪ್ ಮಾಲೀಕ. ಸಿದ್ದಯ್ಯ ನಗರದ ವಿಕ್ಕಿ ಎಂಬಾತನಿಂದ ಕೃತ್ಯ ನಡೆದಿದೆ ಎಂದು ಹಲ್ಲೆಗೊಳಗಾದ ಸೂರ್ಯಪ್ರಭ ಆರೋಪಿಸಿದ್ದಾರೆ.
ಭಾನುವಾರ ಸಂಜೆ ಅಂಗಡಿಗೆ ಬಂದ ಆರೋಪಿ ವಿಕ್ಕಿ ಹಫ್ತಾ ಕೊಡುವಂತೆ ಬೆದರಿಕೆ ಹಾಕಿದ್ದಾನೆ. ಮಾರಕಾಸ್ತ್ರಗಳನ್ನು ತೋರಿಸಿ ಬೆದರಿಕೆ ಹಾಕಿದ್ದರಿಂದ ಮಾಲೀಕ ಸ್ವಲ್ಪ ಹಣ ಕೊಟ್ಟಿದ್ದಾರೆ. ಆಗ ಸಿಟ್ಟಿಗೆದ್ದಿರುವ ವಿಕ್ಕಿ ಏಕಾಏಕಿ ಹಲ್ಲೆ ಮಾಡಿದ್ದಾನೆ. ನಂತರ ಮಾಲೀಕನ ಕಾರಿನಲ್ಲಿ ಪರಾರಿಯಾಗಿಲು ಯತ್ನಿಸಿದ್ದಾನೆ. ಕೊನೆಗೆ ಸ್ಥಳೀಯರು ಆತನನ್ನು ಹಿಡಿದು ಕಾರು ಕಿತ್ತುಕೊಂಡಿದ್ದಾರೆ. ನಂತರ ಅಲ್ಲಿಂದನೂ ಕೂಡ ಆರೋಪಿ ವಿಕ್ಕಿ ಪರಾರಿಯಾಗಿದ್ದಾನೆ.
ತಾಲೂಕು ಕೇಂದ್ರಗಳಲ್ಲೂ ಇಂಥ ಪ್ರಕರಣ ಹೆಚ್ಚಳ : ಗಂಭೀರವಾಗಿ ಗಾಯಗೊಂಡ ಸೂರ್ಯಪ್ರಭ ತಕ್ಷಣ ತುರ್ತು ವಾಹನಕ್ಕೆ ಕರೆ ಮಾಡಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹಾಸನ ಅಷ್ಟೇ ಅಲ್ಲದೆ ಜಿಲ್ಲೆಯ ವಿವಿಧ ತಾಲೂಕು ಕೇಂದ್ರಗಳಲ್ಲೂ ಇಂಥ ಪ್ರಕರಣಗಳು ಹೆಚ್ಚಾಗುತ್ತಿವೆ. ಪೊಲೀಸ್ ಇಲಾಖೆ ಸಿಬ್ಬಂದಿ ಎಷ್ಟೇ ಸನ್ನದ್ಧರಾದರೂ ಅವರ ಕಣ್ತಪ್ಪಿಸಿ ಇಂಥ ಕೃತ್ಯಗಳು ನಡೆಯುತ್ತಿವೆ.