ಬೆಳಗಾವಿ : ಕಳೆದ 2015ರಲ್ಲಿ ಡಿಸಿಸಿ ಬ್ಯಾಂಕ್ ಚುನಾವಣೆಯಿಂದ ಭಿನ್ನಾಭಿಪ್ರಾಯಗಳು ಮೂಡಿದ್ದವು. ಹೀಗಾಗಿ ಈ ಬಾರಿ ಎಲ್ಲರೂ ಒಗ್ಗಟ್ಟಾಗಿ ಹದಿನಾರು ಸ್ಥಾನಗಳನ್ನು ಅವಿರೋಧ ಆಯ್ಕೆ ಮಾಡಿ, ರಾಜ್ಯಕ್ಕೆ ಒಳ್ಳೆಯ ಸಂದೇಶ ನೀಡಲು ನಿರ್ಧರಿಸಿದ್ದೇವೆ ಎಂದು ಕೆಎಂಎಫ್ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ಪಕ್ಷದ ವರಿಷ್ಠರು ಸೂಚಿಸಿದ ಹಿನ್ನೆಲೆಯಲ್ಲಿ ನಮ್ಮಲ್ಲಿರುವ ಭಿನ್ನಾಪ್ರಾಯ ಬದಿಗಿಟ್ಟು ಒಂದಾಗಿ ಹೋಗುವ ನಿಟ್ಟಿನಲ್ಲಿ, ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿನ 16 ಕ್ಷೇತ್ರದಲ್ಲಿ ಅವಿರೋಧ ಆಯ್ಕೆಯಾಗಬೇಕೆಂದು ತೀರ್ಮಾನಕ್ಕೆ ಬಂದಿದ್ದೇವೆ ಎಂದು ಮಾಹಿತಿ ನೀಡಿದರು.
ಮುಂಬರುವ ಲೋಕಸಭೆ, ಜಿಲ್ಲಾ ಪಂಚಾಯಿತಿ, ತಾಲ್ಲೂಕಾ ಪಂಚಾಯಿತಿ ಮತ್ತು ವಿಧಾನ ಸಭೆ ಚುನಾವಣೆಯಲ್ಲಿ ಜಿಲ್ಲೆಯ ಪಕ್ಷದ ಪರವಾಗಿ ಪ್ರಭಾವಿ ನಾಯಕರುಗಳಾದ ಡಿಸಿಎಂ ಲಕ್ಷ್ಮಣ ಸವದಿ, ಉಮೇಶ ಕತ್ತಿ, ರಮೇಶ ಜಾರಕಿಹೊಳಿ ಅವರ ನೇತೃತ್ವದಲ್ಲಿ ಚುನಾವಣೆಗಳನ್ನು ಎದುರಿಸುವ ಜತೆಗೆ ಪಕ್ಷದಲ್ಲಿ ಒಗ್ಗಟ್ಟಿನ ಮಂತ್ರ ಜಪಿಸಲಾಗುವುದು ಎಂದರು.
ಈಗಾಗಲೇ 16 ಸ್ಥಾನಗಳ ಪೈಕಿ 10 ಸ್ಥಾನಗಳು ಅವಿರೋಧ ಆಯ್ಕೆಯಾಗಿವೆ. ಇನ್ನುಳಿದ ಆರು ಸ್ಥಾನಗಳನ್ನು ಸಹ ಅವಿರೋಧ ಆಯ್ಕೆ ಮಾಡುವ ಪ್ರಯತ್ನ ನಡೆಯುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿಧಾನಪರಿಷತ್ ಉಪ ಸಭಾಪತಿ ಆನಂದ ಮಾಮನಿ, ಸಚಿವೆ ಶಶಿಕಲಾ ಜೊಲ್ಲೆ, ಶಾಸಕ ಉಮೇಶ ಕತ್ತಿ, ಸಂಸದ ಅಣ್ಣಾ ಸಾಹೇಬ್ ಜೊಲ್ಲೆ, ರಾಜ್ಯ ಸಭಾ ಸದಸ್ಯ ಈರಣ್ಣಾ ಕಡಾಡಿ, ಶಾಸಕ ಅಭಯ ಪಾಟೀಲ, ವಿಧಾನಪರಿಷತ್ ಸದಸ್ಯ ಮಾಹಾಂತೇಶ ಕವಟಗಿಮಠ, ಮಾಜಿ ಸಂಸದ ರಮೇಶ ಕತ್ತಿ, ಮಾಜಿ ಶಾಸಕ ಸಂಜಯ ಪಾಟೀಲ ಇತರರು ಇದ್ದರು.
Laxmi News 24×7