ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ದಕ್ಷಿಣ ಕಾಶ್ಮೀರದ ಕುಲ್ಗಾಂ ಜಿಲ್ಲೆಯ ನಿವಾಸಿ, ಉಗ್ರ ಬಸಿತ್ ಅಹ್ಮದ್ ದಾರ್ ಎಂಬಾತನ ಬಂಧನಕ್ಕೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) 10 ಲಕ್ಷ ರೂಪಾಯಿ ಬಹುಮಾನ ಘೋಷಿಸಿದೆ.
ಬಸಿತ್ ದಾರ್ ಉಗ್ರ ಸಂಘಟನೆಯಾದ ದಿ ರೆಸಿಸ್ಟೆನ್ಸ್ ಫ್ರಂಟ್ (The Resistance Front – TRF)ನೊಂದಿಗೆ ನಂಟು ಹೊಂದಿದ್ದಾನೆ. ಈತನ ಬಂಧನಕ್ಕಾಗಿ ತನಿಖಾ ಸಂಸ್ಥೆ ಶೋಧ ಕಾರ್ಯ ನಡೆಸುತ್ತಿದೆ.
ಕಣಿವೆ ನಾಡು ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ವರ್ಷ ನಡೆದ ನಾಗರಿಕರ ಹತ್ಯೆ ಪ್ರಕರಣಗಳಲ್ಲಿ ಬಸಿತ್ ದಾರ್ ಬೇಕಾಗಿದ್ದಾನೆ. ಈತನ ವಿರುದ್ಧ ದಾಖಲಾಗಿರುವ ಪ್ರಕರಣ (ಆರ್‌ಸಿ-32/2021/ಎನ್‌ಐಎ/ಡಿಎಲ್‌ಐ)ದಲ್ಲಿ ಎನ್‌ಐಎ ಹುಡುಕಾಟ ನಡೆಸುತ್ತಿದೆ. ಅಹ್ಮದ್ ದಾರ್ ಬಗ್ಗೆ ಮಾಹಿತಿ ನೀಡುವ ಯಾರಿಗಾದರೂ 10 ಲಕ್ಷ ರೂ. ಬಹುಮಾನ ನೀಡಲಾಗುವುದು. ಮಾಹಿತಿ ನೀಡಿದವರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು ಎಂದು ಎನ್‌ಐಎ ಪ್ರಕಟಣೆ ಹೊರಡಿಸಿದೆ.
2019ರಲ್ಲಿ 370ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಕಣಿವೆ ನಾಡಿನಲ್ಲಿ ಕೆಲವು ಹೊಸ ಉಗ್ರಗಾಮಿ ಸಂಘಟನೆಗಳು ಹುಟ್ಟಿಕೊಂಡಿವೆ. ಅವುಗಳಲ್ಲಿ ಟಿಆರ್ಎಫ್ ಸಹ ಒಂದಾಗಿದೆ. ಉಗ್ರಗಾಮಿ ಸಂಘಟನೆಗೆ ಸೇರಿದ ನಂತರ ಬಸಿತ್ ದಾರ್ ಟಿಆರ್ಎಫ್ನ ಕಮಾಂಡರ್ ಅಬ್ಬಾಸ್ ಶೇಖ್ ಆದೇಶಗಳು ಮತ್ತು ನಿರ್ದೇಶನಗಳನ್ನು ಅನುಸರಿಸುತ್ತಿದ್ದ. ಶೇಖ್ ಸಾವಿನ ನಂತರ ದಾರ್ ಸ್ವತಃ ಕಮಾಂಡರ್ ಆಗಿದ್ದ. ಈ ಟಿಆರ್ಎಫ್ ಮತ್ತು ಲಷ್ಕರ್-ಎ-ತೊಯ್ಬಾ ನಡುವೆ ಯಾವುದೇ ವ್ಯತ್ಯಾಸವಿಲ್ಲ. ಲಷ್ಕರ್ ಸಂಘಟನೆಯೇ ಈಗ ಹೊಸ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಹೇಳಿದ್ದಾರೆ.