ಬೆಂಗಳೂರು : ಖಾಸಗಿ ಕಂಪನಿಗೆ ನುಗ್ಗಿ ಎಂ.ಡಿ ಹಾಗೂ ಸಿಇಒ ಇಬ್ಬರನ್ನೂ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದ ಪ್ರಕರಣದ ಮೂವರು ಆರೋಪಿಗಳನ್ನು ಅಮೃತಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ.
ತಡರಾತ್ರಿ ವಿಶೇಷ ಕಾರ್ಯಾಚರಣೆ ಕೈಗೊಂಡ ಪೊಲೀಸರ ತಂಡ ಆರೋಪಿಗಳಾದ ಫೆಲಿಕ್ಸ್, ವಿನಯ್ ರೆಡ್ಡಿ ಹಾಗೂ ಶಿವು ಎಂಬವರನ್ನು ಕುಣಿಗಲ್ ಸಮೀಪ ಬಂಧಿಸಿದೆ.
ಪ್ರಕರಣದ ವಿವರ: ಒಟ್ಟಿಗೆ ಕೆಲಸ ಮಾಡುತ್ತಿದ್ದಾಗ ಫೆಲಿಕ್ಸ್ನನ್ನು ಸದಾ ನಿಂದಿಸುತ್ತಿದ್ದ ಫಣೀಂದ್ರ ಇತ್ತೀಚೆಗೆ ಆತನನ್ನು ಕೆಲಸದಿಂದಲೂ ತೆಗೆದು ಹಾಕಿದ್ದರು. ಅದೇ ದ್ವೇಷಕ್ಕೆ ಫೆಲಿಕ್ಸ್, ಫಣೀಂದ್ರರನ್ನು ಹತ್ಯೆ ಮಾಡುವ ನಿರ್ಧಾರಕ್ಕೆ ಬಂದಿದ್ದ. ಇನ್ನಿಬ್ಬರು ಆರೋಪಿಗಳಾದ ವಿನಯ್ ರೆಡ್ಡಿ ಹಾಗೂ ಶಿವುಗೆ ಫಣೀಂದ್ರನ ಮೇಲೆ ಯಾವುದೇ ದ್ವೇಷವಿರಲಿಲ್ಲ. ಆದರೆ ಫೆಲಿಕ್ಸ್ ಮಾತು ಕೇಳಿ ಹತ್ಯೆಗೆ ಕೈ ಜೋಡಿಸಿದ್ದರು. ಆರೋಪಿಗಳು ಫಣೀಂದ್ರನನ್ನು ಕೊಲ್ಲಲು ಬಂದಿದ್ದರು. ವಿನು ಕುಮಾರ್ನನ್ನು ಹತ್ಯೆ ಮಾಡುವ ಉದ್ದೇಶವಿರಲಿಲ್ಲ. ಆದರೆ ಫಣೀಂದ್ರನ ಹತ್ಯೆ ವೇಳೆ ತಡೆಯಲು ಹೋಗಿದ್ದ ವಿನು ಕುಮಾರ್ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಹತ್ಯೆ ಮಾಡಿದ್ದರು ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.
ಕೃತ್ಯದ ಬಳಿಕ ಪರಾರಿಯಾಗಿದ್ದ ಆರೋಪಿಗಳ ಪತ್ತೆಗಾಗಿ ಈಶಾನ್ಯ ವಿಭಾಗದ ಪೊಲೀಸರ ಐದು ತಂಡ ರಚಿಸಲಾಗಿತ್ತು. ಆರೋಪಿಗಳ ಮೊಬೈಲ್ ನಂಬರ್ ಟವರ್ ಡಂಪ್ ಆಧರಿಸಿ ಬೆನ್ನತ್ತಿದ ಪೊಲೀಸರು ಅಂತಿಮವಾಗಿ ಕುಣಿಗಲ್ ಬಳಿ ಬಂಧಿಸಿದ್ದಾರೆ.