ಬೆಂಗಳೂರು: 2021-22ರ ಅಂತ್ಯಕ್ಕೆ 37.37 ಕೋಟಿ ರೂಪಾಯಿ ಮೊತ್ತದ ಹಣ ದುರುಪಯೋಗ, ನಷ್ಟ ಸಂಭವಿಸಿದ್ದು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಲೆಕ್ಕನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರ (ಸಿಎಜಿ) ವರದಿ ತಿಳಿಸಿದೆ.
ಮಂಗಳವಾರ ವಿಧಾನಮಂಡಲದ ಉಭಯಸದನದಲ್ಲಿ ಮಾರ್ಚ್ 2022ಕ್ಕೆ ಕೊನೆಗೊಂಡ ರಾಜ್ಯ ಸರ್ಕಾರದ ಹಣಕಾಸಿನ ವ್ಯವಹಾರಗಳ ಲೆಕ್ಕಪರಿಶೋಧನಾ ವರದಿಯನ್ನು ಮಂಡಿಸಲಾಯಿತು.
ವರದಿಯಲ್ಲಿ ಹಣಕಾಸುಗಳ ವ್ಯವಹಾರದ ವಿಶ್ಲೇಷಣಾತ್ಮಕ ವಿಮರ್ಶೆ ಮಾಡಲಾಗಿದ್ದು, ಐದು ಆಧ್ಯಾಯಗಳಲ್ಲಿ ರಚಿಸಲಾಗಿದೆ. ಅವಲೋಕನ, ರಾಜ್ಯದ ಹಣಕಾಸು ವ್ಯವಹಾರಗಳು, ಆಯವ್ಯಯ ನಿರ್ವಹಣೆ, ಲೆಕ್ಕಗಳ ಗುಣಮಟ್ಟ ಮತ್ತು ಆರ್ಥಿಕ ನಿರೂಪಣಾ ಪದ್ಧತಿಗಳು ಮತ್ತು ರಾಜ್ಯ ಸಾರ್ವಜನಿಕ ವಲಯ ಉದ್ದಿಮೆಗಳ ಮೇಲೆ ವರದಿ ಬೆಳಕು ಚೆಲ್ಲಿದೆ. ಅದರಂತೆ 2021-22ರ ಅಂತ್ಯಕ್ಕೆ 37.37 ಕೋಟಿ ರೂ. ಮೊತ್ತದ ಹಣದ ದುರುಪಯೋಗ, ನಷ್ಟ ಸೇರಿ 61 ಪ್ರಕರಣಗಳು ವಿಲೇವಾರಿಯಾಗದೆ ಬಾಕಿ ಉಳಿದುಕೊಂಡಿದೆ ಎಂದು ಸಿಎಜಿ ವರದಿ ಉಲ್ಲೇಖಿಸಿದೆ.
ಅಕ್ರಮ ಗಣಿಗಾರಿಕೆಯಿಂದ ಆದಾಯ ನಷ್ಟ: 2017-2018ರವರೆಗೆ 8,29,56,835 ಟನ್ಗಳಷ್ಟು ಖನಿಜವನ್ನು ಗುತ್ತಿಗೆ ಪ್ರದೇಶದ ಹೊರಗಡೆಯಿಂದ ತೆಗೆಯಲಾಗಿದೆ. ಸುಮಾರು 5,28,85,063 ಟನ್ ಖನಿಜವು ಪರವಾನಗಿ ಇಲ್ಲದೆ ರವಾನೆಯಾಗಿದೆ. ಇದರಿಂದ ಒಟ್ಟು ಆದಾಯ ನಷ್ಟವಾಗಿರುವುದು 1.18 ಕೋಟಿ ರೂಪಾಯಿ ರಾಜಧನ, ದಂಡ ವಸೂಲು ಮಾಡಲು ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ವರದಿ ತಿಳಿಸಿದೆ.