Breaking News

ದೇಗುಲದ ಗರ್ಭಗುಡಿ ಮೇಲೆ ಕೋಳಿ ಮರಿಗಳನ್ನು ಹಾರಿಸಿ ಹರಕೆ ತೀರಿಸುವ ವಿಶಿಷ್ಟ ಪದ್ಧತಿ

Spread the love

ಬೆಳಗಾವಿ : ಜಾತ್ರೆಗಳಲ್ಲಿ ನಡೆಯುವ ರಥೋತ್ಸವಗಳಲ್ಲಿ ಸಾಮಾನ್ಯವಾಗಿ ಬಾಳೆಹಣ್ಣು, ಉತ್ತತ್ತಿ ಮುಂತಾದವುಗಳನ್ನು ದೇವರಿಗೆ ಎಸೆಯುವುದನ್ನು ನಾವು ನೋಡಿದ್ದೇವೆ. ಆದರೆ, ಬೆಳಗಾವಿಯಲ್ಲಿ ನಡೆಯುವ ಜಾತ್ರೆಯೊಂದರಲ್ಲಿ ಗರ್ಭಗುಡಿ ಮೇಲೆ ಕೋಳಿ ಮರಿಗಳನ್ನು ಎಸೆಯುವ ವಿಶಿಷ್ಟ ಪದ್ಧತಿಯಿದೆ. ವಡಗಾವಿ ಆರಾಧ್ಯ ದೇವಿ ಮಂಗಾಯಿದೇವಿ ಜಾತ್ರೆಯಲ್ಲಿ ಕೋಳಿ ಮರಿಗಳನ್ನು ಗರ್ಭಗುಡಿ ಮೇಲೆ ಎಸೆಯುವ ಪದ್ಧತಿ ಹಿಂದಿನಿಂದಲೂ ನಡೆದುಕೊಂಡು ಬಂದಿದೆ.

ಪ್ರತಿ ವರ್ಷ ಆಷಾಢ ಮಾಸದ ಹುಣ್ಣಿಮೆಯ ಬಳಿಕ ಬರುವ ಮಂಗಳವಾರದಿಂದ ಮಂಗಾಯಿ ದೇವಿ ಜಾತ್ರೆ ಪ್ರಾರಂಭವಾಗುತ್ತದೆ. ಅದ್ಧೂರಿ ಜಾತ್ರೆಗೆ ನೆರೆ ರಾಜ್ಯಗಳಾದ ಗೋವಾ, ಮಹಾರಾಷ್ಟ್ರದಿಂದಲೂ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಮಂಗಳವಾರದಿಂದ ಶುಕ್ರವಾರದವರೆಗೆ ನಾಲ್ಕು ದಿನಗಳ ಕಾಲ ಜಾತ್ರೆ ನಡೆಯುತ್ತದೆ. ಅಪಾರ ಕಾರಣಿಕ ಹೊಂದಿರುವ ಮಂಗಾಯಿ ದೇವಿಯು ಭಕ್ತರ ಇಷ್ಟಾರ್ಥಗಳನ್ನು ಪೂರೈಸುತ್ತಾಳೆ ಎಂಬುದು ಇಲ್ಲಿನ ಜನರ ನಂಬಿಕೆ.

ವಿಶಿಷ್ಠ ಪದ್ಧತಿ : ಕೋಳಿ ಮರಿಗಳನ್ನು ಮಂದಿರದ ಗರ್ಭಗುಡಿಯ ಮೇಲೆ ಹಾರಿಸುವ ಪದ್ಧತಿ ಈ ದೇವಸ್ಥಾನದ ವೈಶಿಷ್ಟ್ಯತೆಗಳಲ್ಲಿ ಒಂದು. ಈ ಮೊದಲು ಇಲ್ಲಿನ ದೇವಿಗೆ ಕುರಿ, ಕೋಳಿಗಳನ್ನು ಬಲಿ ಕೊಡಲಾಗುತ್ತಿತ್ತು. ಆದರೆ, ಇದರ ನಿಷೇಧದ ಬಳಿಕ ಇದೀಗ ಭಕ್ತರು ಕೋಳಿ ಮರಿಗಳನ್ನು ತಾಯಿಯ ಗರ್ಭಗುಡಿಯ ಮೇಲೆ ಹಾರಿಸಿ ತಮ್ಮ‌ ಹರಕೆ ಪೂರೈಸುತ್ತಾರೆ.

ತವರು ಮನೆ ದೇವತೆ : ವಡಗಾವಿಯ ಪಾಟೀಲ್‌ ಗಲ್ಲಿಯಲ್ಲಿರುವ ಮಂಗಾಯಿ ದೇವಿ ‘ತವರು ಮನೆಯ ದೇವತೆ’ ಎಂದೇ ಪ್ರಸಿದ್ಧಿ ಪಡೆದಿದ್ದಾಳೆ. ದೇವಿಯ ಜಾತ್ರೆಗೆ ಹೆಣ್ಣು ಮಕ್ಕಳೇ ಹೆಚ್ಚಾಗಿ ಬರುತ್ತಾರೆ. ಬೆಳಗಾವಿ ಜಿಲ್ಲೆಯಿಂದ ಬೇರೆ ಬೇರೆ ಊರುಗಳಿಗೆ ಮದುವೆಯಾಗಿ ಹೋದ ಬಹುತೇಕ ಹೆಣ್ಣುಮಕ್ಕಳು ಆಷಾಢ ಮಾಸದಲ್ಲಿ ತವರಿಗೆ ಮರಳಿ ತವರೂರು ಜಾತ್ರೆಗೆ ಬರುತ್ತಾರೆ. ಅದಕ್ಕಾಗಿಯೇ ಈ ಮಂಗಾಯಿ ದೇವತೆಯನ್ನು ತವರು ಮನೆ ದೇವತೆ ಎಂದು ಕರೆಯುವುದುಂಟು.

ಈ ಬಗ್ಗೆ ಮಾತನಾಡಿದ ಭಕ್ತರಾದ ಶೋಭಾ ಎಕಬೋಟೆ, “ಮಂಗಾಯಿ ನಮ್ಮ ಗ್ರಾಮದೇವತೆ. ನನ್ನ ತವರು ಬೆಳಗಾವಿ, ಮದುವೆ ಮಾಡಿಕೊಟ್ಟಿದ್ದು ಹುಬ್ಬಳ್ಳಿಗೆ. ಪ್ರತಿ ವರ್ಷ ಜಾತ್ರೆಗೆ ಬಂದು ಉಡಿ ತುಂಬಿ ಹೋಗುತ್ತೇವೆ. ದೇವಿಯಲ್ಲಿ ಬೇಡಿಕೊಂಡ ಇಷ್ಟಾರ್ಥ ಈಡೇರಿದ ಬಳಿಕ ಕೋಳಿ ಮರಿ ಹಾರಿಸಿ‌ ಹರಿಕೆ ತೀರಿಸುವ ಪದ್ಧತಿ ಹಿಂದಿನಿಂದಲೂ ನಡೆದುಕೊಂಡು ಬಂದಿದೆ” ಎಂದು ಹೇಳಿದರು.

ಶೃತಿ ರಾಯ್ಕರ್ ಮತ್ತು ಸುರೇಖಾ ರಾಠೋಡ್​ ಮಾತನಾಡಿ, “ಮಂಗಾಯಿ‌ ದೇವಿಯಲ್ಲಿ ಏನೇ ಬೇಡಿಕೊಂಡರೂ ಖಂಡಿತವಾಗಲೂ ಈಡೇರುತ್ತದೆ. ಈ ದೇವಿ ಬಹಳ ಶಕ್ತಿಶಾಲಿ. ನಾವು ಚಿಕ್ಕಂದಿನಿಂದಲೂ ಜಾತ್ರೆಗೆ ಬರುತ್ತಿದ್ದೇವೆ. ಕೋಳಿ ಮರಿ ಹಾರಿಸಿ ನಮ್ಮ ಹರಿಕೆ ತೀರಿಸುತ್ತೇವೆ” ಎಂದರು.

ಭಕ್ತರು ಹರಕೆ ತೀರಿಸಲು ಗರ್ಭಗುಡಿ ಮೇಲೆ ಎಸೆಯುವ ಕೆಲವು ಕೋಳಿ ಮರಿಗಳು ಸಾವನ್ನಪ್ಪುತ್ತವೆ. ಜೀವಂತ ಮರಿಗಳನ್ನು ಸಂಗ್ರಹಿಸಿ ದೇವಸ್ಥಾನದವರು ಮಾರಾಟ ಮಾಡುತ್ತಾರೆ.


Spread the love

About Laxminews 24x7

Check Also

ಅಥಣಿ ನಗರದಲ್ಲಿ ಇಂದು ರೋಟರಿ ಸಂಸ್ಥೆ ಅಧೀನದಲ್ಲಿ ಶ್ರೀ ಜ್ಯೋತಿಬಾ ದೇವಸ್ಥಾನ ಆವರಣದಲ್ಲಿ ನೂತನವಾಗಿ ನಿರ್ಮಿಸಿದ ರೋಟರಿ ಉದ್ಯಾನವನ

Spread the loveಅಥಣಿ ನಗರದಲ್ಲಿ ಇಂದು ರೋಟರಿ ಸಂಸ್ಥೆ ಅಧೀನದಲ್ಲಿ ಶ್ರೀ ಜ್ಯೋತಿಬಾ ದೇವಸ್ಥಾನ ಆವರಣದಲ್ಲಿ ನೂತನವಾಗಿ ನಿರ್ಮಿಸಿದ ರೋಟರಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ